ಲಿಂಗ ಲಿಂಗವೆಂದಲ್ಲಿಯೇ ತಪ್ಪಿತ್ತು,
ಜಂಗಮ ಜಂಗಮವೆಂದಲ್ಲಿಯೇ ತಪ್ಪಿತ್ತು,
ಪ್ರಸಾದ ಪ್ರಸಾದವೆಂದಲ್ಲಿಯೇ ತಪ್ಪಿತ್ತು.
ಈ ತ್ರಿವಿಧದ ನಿಕ್ಷೇಪದ ಸಂಚವ ಬಲ್ಲರೆ
ಈ ಲೋಕದಲ್ಲಿ ಇದ್ದರೇನು?
ಆ ಲೋಕಕ್ಕೆ ಹೋದರೇನು?
ಆ ಲೋಕದಿಂದ ಈ ಲೋಕಕ್ಕೆ ಬಂದರೇನು?
ಹದಿನಾಲ್ಕು ಭುವನದೊಳಗಿದ್ದ ನಿಸ್ಸಾರಮಂ ಬಿಟ್ಟು
ಲಿಂಗಸಾರಾಯ ಮೋಹಿಯಾಗಿ
ಕೂಡಲಚೆನ್ನಸಂಗನಲ್ಲಿ ನಿರ್ಲೇಪನಾದ ಶರಣ.