Index   ವಚನ - 797    Search  
 
ಅಂಗಲಿಂಗೈಕ್ಯನ ಲಾಂಛನಧಾರಿಯೆಂಬೆ, ಜೀವಲಿಂಗೈಕ್ಯನ ಉಪಜೀವಿಯೆಂಬೆ, ಪ್ರಾಣಲಿಂಗೈಕ್ಯನ ಸಂಸಾರಿಯೆಂಬೆ, ಈ ತ್ರಿವಿಧ ಲಿಂಗೈಕ್ಯನೆ? ಅಲ್ಲ, ಮತ್ತೆಯೂ ಲಿಂಗೈಕ್ಯನೇ ಬೇಕು. ತಿಳಿದು ನೋಡಾ! ಸಾಹಿತ್ಯವಾದಲ್ಲಿ ಅಂಗಲಿಂಗೈಕ್ಯವು, ಮುಟ್ಟಿದಲ್ಲಿ ಇಷ್ಟಲಿಂಗೈಕ್ಯವು, ಬೆರಸಿದಲ್ಲಿ ಪ್ರಾಣಲಿಂಗೈಕ್ಯವು, ಈ ತ್ರಿವಿಧ ಲಿಂಗೈಕ್ಯವು ಅಲ್ಲ, ಮತ್ತೆಯೂ ಲಿಂಗೈಕ್ಯವೆ ಬೇಕು. ತಿಳಿದು ನೋಡಾ! ಕಾಯದ ಕೊನೆಯಲಿಪ್ಪುದು ಪ್ರಾಣಲಿಂಗವು, ಜೀವದ ಕೊನೆಯಲಿಪ್ಪುದು ಪ್ರಾಣಲಿಂಗವು, ಭಾವದ ಕೊನೆಯಲಿಪ್ಪುದು ಪ್ರಾಣಲಿಂಗವು. ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ! ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ! ಈ ಲಿಂಗವನರಿದು, ಏಕೋನಿಷ್ಠೆ ಲಿಂಗವ ಮರೆದು ಆ ಇಷ್ಟದಲ್ಲಿ ನೆರೆಯ ಬಲ್ಲರೆ ಕೂಡಲಚೆನ್ನಸಂಗಯ್ಯಾ ಅವರನಚ್ಚಲಿಂಗೈಕ್ಯರೆಂಬೆ.