Index   ವಚನ - 846    Search  
 
ಆದಿ ಅನಾದಿಯಿಲ್ಲದಂದು, ಮಹಾಬಯಲು ಬೆಳಗಿಲ್ಲದಂದು ನಿಜಪ್ರಸಾದವ ತೋರಿಸಾ. ನಾದವನೆ ಬಯಲು ನುಂಗಿ, ಬಯಲನೆ ಕಳೆ ನುಂಗಿ ಹೊಳೆವ ಲಿಂಗವಿದೆಲ್ಲಿಯದೊ? ಪ್ರಸಾದಿಯ ಪ್ರಸಾದ ಮುಟ್ಟಿದಲ್ಲದೆ ಲಿಂಗಾರ್ಪಿತಕ್ಕೆ ಸಲ್ಲದು, ಜಗಕ್ಕೆ ಪ್ರಸಾದಿಗಳೆಂತಪ್ಪರೊ? ಅನಾದಿಯ ಸೋಂಕಿಲ್ಲದ ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರು ಅನಂತ ಕುಳರಹಿತರು.