Index   ವಚನ - 893    Search  
 
ಅಂಗಲಿಂಗ ನಿಜಸಂಬಂಧವನ್ನುಳ್ಳ ನಿಜವೀರಶೈವ ಸಂಪನ್ನರಾದ ಭಕ್ತಜಂಗಮಕೆ ಗುರುವೊಂದು ಲಿಂಗವೊಂದು ಜಂಗಮವೊಂದು, ಪಾದೋದಕವೊಂದು, ಪ್ರಸಾದವೊಂದು ಸತ್ಯ ಸದಾಚಾರ ಸತ್ಕ್ರೀಸಮ್ಯಜ್ಞಾನಯುಕ್ತವಾದ ಸದ್‍ಭಕ್ತಿ ಒಂದಲ್ಲದೇ ಭಿನ್ನವುಂಟೆ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಒಂದಲ್ಲದೇ ಭಿನ್ನವುಂಟೆ? ಇಲ್ಲವಾಗಿ. ಇದು ಕಾರಣ ಭಕ್ತ ಜಂಗಮಕ್ಕೆ ಸತ್ಯ ಸರ್ವಜ್ಞಾನಯುಕ್ತವಾದ ಗುರುಭಕ್ತಿ ಲಿಂಗನಿಷ್ಠಾವಧಾನ ಜಂಗಮವಿಶ್ವಾಸ ಪ್ರಸಾದಪರಿಣತೆ ಭಕ್ತಾಚಾರವರ್ತನೆಯಿಂ ನಿಜಮುಕ್ತಿಯನೈದಲರಿಯದೆ ಅಜ್ಞಾನದಿಂದ ಅಹಂಕರಿಸಿ ಮುನ್ನ ತನ್ನ ಅನ್ವಯವಿಡಿದು ಬಂದ ನಿಜಗುರುವನನ್ಯವ ಮಾಡಿ ಭಿನ್ನವಿಟ್ಟು ಕರೆವ ಕುನ್ನಿಗಳು ನೀವು ಕೇಳಿರೋ: ಗುರು ಭಿನ್ನವಾದಲ್ಲಿ ದೀಕ್ಷೆ ಭಿನ್ನ, ದೀಕ್ಷೆ ಭಿನ್ನವಾದಲ್ಲಿ ಲಿಂಗ ಭಿನ್ನ ಲಿಂಗ ಭಿನ್ನವಾದಲ್ಲಿ ಪೂಜೆ ಭಿನ್ನ, ಪೂಜೆ ಭಿನ್ನವಾದಲ್ಲಿ ಅರ್ಪಿತ ಪ್ರಸಾದ ಭಿನ್ನ, ಅರ್ಪಿತ ಪ್ರಸಾದ ಭಿನ್ನವಾದಲ್ಲಿ ಅಂಗಲಿಂಗ ಸಂಬಧವನ್ನುಳ್ಳ ನಿಜವೀರಶೈವ ಷಡುಸ್ಥಲ ಆಚಾರಕ್ಕೆ ಹೊರಗಾಗಿ ನರಕಕ್ಕೆ ಇಳಿವ. ಗುರುವಾಕ್ಯವ ಮೀರಿ ಗುರುವನನ್ಯವ ಮಾಡಿ ಲಿಂಗವ ಭಿನ್ನವಿಟ್ಟು ಕಂಡು ಜಂಗಮದ ಜಾತಿವಿಡಿದು ನೇತಿಮಾಡಿ ಪ್ರಸಾದವ ಎಂಜಲೆಂದು ಅತಿಗಳೆದು ಗುರುಮಾರ್ಗವ ತಪ್ಪಿನಡೆದು ಗುರುಭಕ್ತಿ ಪರಾಙ್ಮುಖರಾದವರ ಭಕ್ತ ಜಂಗಮವೆಂದಾರಾಧಿಸಿ ಪ್ರಸಾದವ ಕೊಳಲಾಗದು, ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ.