ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ
ಚಿದ್ವಿಭೂತಿ ರುದ್ರಾಕ್ಷಿ ಚಿನ್ಮಂತ್ರಗಳ
ಗುರುವಚನ ಪ್ರಮಾಣದಿಂದ ನಿರಂತರವು ಆಚರಿಸಿ,
ಚಿದ್ಘನ ಇಷ್ಟ ಮಹಾಲಿಂಗವ
ಉರಸ್ಥಲದಲ್ಲಿ ಧರಿಸಬೇಕಾದಡೆ,
ದಾರದಿಂದ ಹುಟ್ಟಿದ ಸಜ್ಜೆಯ ಕರಕಮಲವಟುವ
ನೂಲಕಾಯಿ, ಬಿಲ್ವಕಾಯಿ,
ಗಂಧದ ಮನೆ, ನಾರಂಗದ ಕಾಯಿ,
ರಜತ, ಹೇಮ, ತಾಮ್ರ, ಹಿತ್ತಾಳೆ, ಮೃತ್ತಿಕೆ ಮೊದಲಾದ
ಆವುದು ತನಗೆ ಯೋಗ್ಯವಾಗಿ ಬಂದ
ಚಿದ್ಘನಲಿಂಗದೇವಂಗೆ ಪರಿಣಾಮ ಕಟ್ಟುವಂತೆ,
ಮೂವತ್ತಾರೆಳೆಯ ದಾರವಾದಡೆಯೂ ಸರಿಯೆ,
ನಾಲ್ವತ್ತೆರಡೆಳೆಯ ದಾರವಾದಡೆಯೂ ಸರಿಯೆ,
ಐವತ್ತಾರೆಳೆಯಾದಡೆಯೂ ಸರಿಯೆ,
ಅರುವತ್ತುಮೂರಾದಡೆಯೂ ಸರಿಯೆ,
ನೂರೆಂಟು ಇನ್ನೂರ ಹದಿನಾರು,
ಮುನ್ನೂರರುವತ್ತು ಎಳೆ ಮೊದಲಾಗಿ
ಲಿಂಗಾಣತಿಯಿಂದ ಒದಗಿ ಬಂದಂತೆ
ಶಿವಲಾಂಛನಸಂಯುಕ್ತದಿಂದ ದಾರವ ಕೂಡಿ
ಜ್ಞಾನಕ್ರಿಯಾಯುಕ್ತವಾದ ಎರಡೆಳೆಯಾದಡೆಯೂ ಸರಿಯೆ,
ಪರಿಪೂರ್ಣ ಅವಿರಳ ಪರಂಜ್ಯೋತಿ ಎಂಬ
ಮಹಾಜ್ಞಾನಸೂತ್ರಯುಕ್ತವಾದ
ಮೂರೆಳೆಯಾದಡೆಯೂ ಸರಿಯೆ.
ಸತ್ತು ಚಿತ್ತು ಆನಂದ ನಿತ್ಯವೆಂಬ
ಸ್ವಾನುಭಾವ ಸೂತ್ರಯುಕ್ತವಾದ
ನಾಲ್ಕೆಳೆಯಾದಡೆಯೂ ಸರಿಯೆ.
ಆ ಲಿಂಗಗೃಹಂಗಳಿಗೆ
ಮಂತ್ರಧ್ಯಾನದಿಂದ ಸೂತ್ರವ ರಚಿಸಿ
ಲಾಂಛನಯುಕ್ತವಾದ ಪಾವಡ
ಯಾವುದಾದಡೆಯೂ ಸರಿಯೆ,
ಗುರುಪಾದೋದಕದಲ್ಲಿ
ತೊಳೆದು ಮಡಿಕೆಯ ಮಾಡಿ,
ಬೆಳ್ಳಿ ಬಂಗಾರ ತಾಮ್ರ ಹಿತ್ತಾಳೆ
ಕರತಾಳವೋಲೆ ಮೊದಲಾಗಿ ತಗಡ ಮಾಡಿ.
ಪ್ರಮಾಣಯುಕ್ತವಾಗಿ
ಪಾವಡವ ಮಡಿಚಿ ಹುದುಗಿ,
ಪೂರ್ವ ಗಳಿಗೆಯಲ್ಲಿ ತ್ರಿವಿಧಪ್ರಣವ,
ಪಶ್ಚಿಮ ಗಳಿಗೆಯಲ್ಲಿ ತ್ರಿವಿಧಪ್ರಣವ
ಮಧ್ಯ ಗಳಿಗೆಯಲ್ಲಿ ತ್ರಿವಿಧಪ್ರಣವ
ಎತ್ತುವ ಹುದುಗದಲ್ಲಿ ಪಂಚಪ್ರಣವ,
ಉತ್ತರ ಭಾಗದರಗಿನಲ್ಲಿ ಚಿಚ್ಛಕ್ತಿಪ್ರಣವ,
ದಕ್ಷಿಣ ಭಾಗದರಗಿನಲ್ಲಿ ಚಿಚ್ಛಿವಪ್ರಣವ,
ಇಂತು ಹದಿನಾರು ಪ್ರಣವಂಗಳ
ಷೋಡಶವರ್ಣಸ್ವರೂಪವಾದ
ಷೋಡಶಕಗಳೆಂದು ಭಾವಿಸಿ,
ಕ್ರಿಯಾಭಸಿತದಿಂದ ಆಯಾಯ [ಸ್ಧಲದಲ್ಲಿ] ಸ್ಥಾಪಿಸಿ,
ಆ ಮಂತ್ರಗೃಹದಲ್ಲಿ ಚಿದ್ಘನಮಹಾಪರತತ್ತ್ವಮೂರ್ತಿಯ
ಮೂರ್ತವ ಮಾಡಿಸುವುದಯ್ಯಾ,
ಆಮೇಲೆ ನಿರಂಜನಜಂಗಮ
ಪಾದಪೂಜೆಯ ಮಾಡಬೇಕಾದಡೆ
ರೋಮಶಾಟಿಯಾಗಲಿ,
ಪಾವಡವಾಗಲಿ, ಆಸನವ ರಚಿಸಿ,
ಮಂತ್ರಸ್ಮರಣೆಯಿಂದ ಗುರುಪಾದೋದಕದ
ವಿಭೂತಿಯಿಂದ
ಸಂಪ್ರೋಕ್ಷಣೆಯ ಮಾಡಿ ಪುಷ್ಪಪತ್ರೆಗಳ ರಚಿಸಿ,
ಆ ಮಹಾಪ್ರಭುಜಂಗಮಕ್ಕೆ
ಅರ್ಘ್ಯಪಾದ್ಯಾಚಮನವ ಮಾಡಿಸಿ,
ಪಾವುಗೆಯ ಮೆಟ್ಟಿಸಿ ಮಂತ್ರಸ್ಮರಣೆಯಿಂದ
ಪಾಣಿಗಳನೇಕಭಾಜನವ ಮಾಡಿ,
ಬಹುಪರಾಕೆಂದು ಆ ಸಿಂಹಾಸನಕ್ಕೈತಂದು
ಮೂರ್ತವ ಮಾಡಿದ ಮೇಲೆ
ಪಾದಾಭಿಷೇಕಜಲವ ಶಿವಗೃಹಕ್ಕೆ ತಳಿದು,
ಪಾದೋದಕ ಪುಷ್ಪೋದಕ ಗಂಧೋದಕ ಭಸ್ಮೋದಕ
ಮಂತ್ರೋದಕದಿಂದ ಲಿಂಗಾಭಿಷೇಕವ ಮಾಡಿಸಿ,
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ
ಷೋಡಶೋಪಚಾರವ ಮಾಡಿ,
ಸಮ್ಮುಖದಲ್ಲಿ ಗರ್ದುಗೆಯ ಹಾಕಿ,
ಅಷ್ಪಾಂಗಹೊಂದಿ ಶರಣುಹೊಕ್ಕು,
ಗರ್ದುಗೆಯ ಮೇಲೆ ಮೂರ್ತವ ಮಾಡಿ,
ಆ ಲಿಂಗಜಂಗಮವ ಮೂಲಮಂತ್ರದಿಂದ
ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ
ತನ್ನ ವಾಮಕರದ ಪಂಚಾಂಗುಲಿಗಳಲ್ಲಿ
ಪಂಚಪ್ರಣವವ ಲಿಖಿಸಿ
ಮಧ್ಯಸಿಂಹಾಸನದಲ್ಲಿ
ಮೂಲಪ್ರಣವ ಸ್ಥಾಪಿಸಿ ಅರ್ಚಿಸಿ,
ಮಹಾಪ್ರಭುಜಂಗಮದ
ಶ್ರೀಪಾದವ ಮೂರ್ತವ ಮಾಡಿ
ಬಹಿರಂಗದ ಕ್ರೀ ಅಂತರಂಗದ ಕ್ರೀಯಿಂದರ್ಚಿಸಿ
ಪ್ರಥಮ ತಳಿಗೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ
ತ್ರಿಪುಂಡ್ರರೇಖೆಗಳ ರಚಿಸಿ,
ಪಂಚದಿಕ್ಕುಗಳಲ್ಲಿ ಪ್ರಣವವ ಲಿಖಿಸಿ,
ದ್ವಿತೀಯ ಬಟ್ಟಲೊಳಗೆ ಮೂಲಪ್ರಣವವ ಲಿಖಿಸಿ
ಗುರುಪಾದೋದಕದ ಪಾತ್ರೆಯಲ್ಲಿ
ಬಿಂದುಯುಕ್ತವಾಗಿ ಮೂಲಪ್ರಣವವ ಲಿಖಿಸಿ
ತ್ರಿವಿಧಲಿಂಗಸ್ವರೂಪವಾದ ಸ್ಥಾನವನರಿದು
ಪಂಚಾಕ್ಷರ, ಷಡಕ್ಷರ, ನವಾಕ್ಷರ
ಸ್ಮರಣೆಯಿಂದ ಪಡಕೊಂಡು
ಮಂತ್ರಸ್ಮರಣೆಯಿಂದ ಲಿಂಗ ಜಂಗಮ
ಭಕ್ತ ಶರಣಗಣಂಗಳಿಗೆ ಸಲಿಸಿ,
ಮುಕ್ತಾಯವ ಮಾಡಿ ಪ್ರಸಾದಭೋಗವ
ತಿಳಿದಾಚರಿಸೆಂದಾತ
ನಮ್ಮ ಕೂಡಲಚೆನ್ನಸಂಗಮದೇವ.
Art
Manuscript
Music
Courtesy:
Transliteration
Ayyā, guruliṅgajaṅgama karuṇakaṭākṣadinda
cidvibhūti rudrākṣi cinmantragaḷa
guruvacana pramāṇadinda nirantaravu ācarisi,
cidghana iṣṭa mahāliṅgava
urasthaladalli dharisabēkādaḍe,
dāradinda huṭṭida sajjeya karakamalavaṭuva
nūlakāyi, bilvakāyi,
gandhada mane, nāraṅgada kāyi,
rajata, hēma, tāmra, hittāḷe, mr̥ttike modalāda
āvudu tanage yōgyavāgi banda
cidghanaliṅgadēvaṅge pariṇāma kaṭṭuvante,
mūvattāreḷeya dāravādaḍeyū sariye,
nālvatteraḍeḷeya dāravādaḍeyū sariye,
Aivattāreḷeyādaḍeyū sariye,
aruvattumūrādaḍeyū sariye,
nūreṇṭu innūra hadināru,
munnūraruvattu eḷe modalāgi
liṅgāṇatiyinda odagi bandante
śivalān̄chanasanyuktadinda dārava kūḍi
jñānakriyāyuktavāda eraḍeḷeyādaḍeyū sariye,
paripūrṇa aviraḷa paran̄jyōti emba
mahājñānasūtrayuktavāda
mūreḷeyādaḍeyū sariye.
Sattu cittu ānanda nityavemba
svānubhāva sūtrayuktavāda
nālkeḷeyādaḍeyū sariye.
Ā liṅgagr̥haṅgaḷige
Mantradhyānadinda sūtrava racisi
lān̄chanayuktavāda pāvaḍa
yāvudādaḍeyū sariye,
gurupādōdakadalli
toḷedu maḍikeya māḍi,
beḷḷi baṅgāra tāmra hittāḷe
karatāḷavōle modalāgi tagaḍa māḍi.
Pramāṇayuktavāgi
pāvaḍava maḍici hudugi,
pūrva gaḷigeyalli trividhapraṇava,
paścima gaḷigeyalli trividhapraṇava
Madhya gaḷigeyalli trividhapraṇava
ettuva hudugadalli pan̄capraṇava,
uttara bhāgadaraginalli cicchaktipraṇava,
dakṣiṇa bhāgadaraginalli cicchivapraṇava,
intu hadināru praṇavaṅgaḷa
ṣōḍaśavarṇasvarūpavāda
ṣōḍaśakagaḷendu bhāvisi,
kriyābhasitadinda āyāya [sdhaladalli] sthāpisi,
ā mantragr̥hadalli cidghanamahāparatattvamūrtiya
mūrtava māḍisuvudayyā,
āmēle niran̄janajaṅgama
Pādapūjeya māḍabēkādaḍe
rōmaśāṭiyāgali,
pāvaḍavāgali, āsanava racisi,
mantrasmaraṇeyinda gurupādōdakada
vibhūtiyinda
samprōkṣaṇeya māḍi puṣpapatregaḷa racisi,
ā mahāprabhujaṅgamakke
arghyapādyācamanava māḍisi,
pāvugeya meṭṭisi mantrasmaraṇeyinda
pāṇigaḷanēkabhājanava māḍi,
bahuparākendu ā sinhāsanakkaitandu
mūrtava māḍida mēle
pādābhiṣēkajalava śivagr̥hakke taḷidu,
Pādōdaka puṣpōdaka gandhōdaka bhasmōdaka
mantrōdakadinda liṅgābhiṣēkava māḍisi,
sākāra nirākāra aṣṭavidhārcane
ṣōḍaśōpacārava māḍi,
sam'mukhadalli gardugeya hāki,
aṣpāṅgahondi śaraṇuhokku,
gardugeya mēle mūrtava māḍi,
ā liṅgajaṅgamava mūlamantradinda
animiṣadr̥ṣṭiyinda nirīkṣisi
tanna vāmakarada pan̄cāṅguligaḷalli
pan̄capraṇavava likhisi
madhyasinhāsanadalli
mūlapraṇava sthāpisi arcisi,
mahāprabhujaṅgamada
Śrīpādava mūrtava māḍi
bahiraṅgada krī antaraṅgada krīyindarcisi
prathama taḷigeyalli pūrva paścima uttara dakṣiṇa
tripuṇḍrarēkhegaḷa racisi,
pan̄cadikkugaḷalli praṇavava likhisi,
dvitīya baṭṭaloḷage mūlapraṇavava likhisi
gurupādōdakada pātreyalli
binduyuktavāgi mūlapraṇavava likhisi
trividhaliṅgasvarūpavāda sthānavanaridu
pan̄cākṣara, ṣaḍakṣara, navākṣara
smaraṇeyinda paḍakoṇḍu
mantrasmaraṇeyinda liṅga jaṅgama
bhakta śaraṇagaṇaṅgaḷige salisi,
muktāyava māḍi prasādabhōgava
tiḷidācarisendāta
nam'ma kūḍalacennasaṅgamadēva.