Index   ವಚನ - 953    Search  
 
ಅಯ್ಯಾ, ನಿಮ್ಮ ನಿಜಾಚರಣೆಯ ನಿಲುಕಡೆಯ ಭವಪಾಶಪ್ರಾಣಿಗಳೆತ್ತ ಬಲ್ಲರಯ್ಯಾ? ಅದೆಂತೆಂದಡೆ, ಲೋಕದಲ್ಲಿ ದೃಷ್ಟವುಂಟು. ಅಯ್ಯಾ ಕುರಿ ಬಲ್ಲುದೆ ರಸದಾಳಿ ಕಬ್ಬಿನ ಸ್ವಾದವ? ಶುನಿ ಬಲ್ಲುದೆ ಕಲ್ಪವೃಕ್ಷವ? ದಂಷ್ಟ್ರಿ ಬಲ್ಲುದೆ ಕಾಮಧೇನುವ? ಗಾರ್ದಭ ಬಲ್ಲುದೆ ಚಿಂತಾಮಣಿಯ? ನರಿ ಬಲ್ಲುದೆ ಗಜಭದ್ರವ? ಕಾಗೆ ಬಲ್ಲುದೆ ಪರಮಾಮೃತವ? ಅಂಧಕ ಬಲ್ಲನೆ ಕನ್ನಡಿ ಬಿಂಬ ಮೊದಲಾಗಿ ಅನಂತ ಚಿತ್ರವಿಚಿತ್ರಂಗಳ? ಬಧಿರ ಬಲ್ಲನೆ ಪ್ರಣವೋಂ ನಾದ ಮೊದಲಾದ ದಶನಾದಗಳ? ಷಂಡ ಬಲ್ಲನೆ ರತಿಸಂಯೋಗವ? ತೊತ್ತು ಬಲ್ಲಳೆ ರಾಜಭೋಗವ? ಹೇಡಿ ಬಲ್ಲನೆ ರಣಧೀರತ್ವವ? ದರಿದ್ರ ಬಲ್ಲನೆ ನವರತ್ನಂಗಳ? ಬೆಸ್ತ ಬಲ್ಲನೆ ಅಂದಳ ಮೊದಲಾದ ಅಷ್ಟಭೋಗಂಗಳ? ಮೂಢ ಬಲ್ಲನೆ ಶಿವಕವಿತ್ವವ? ಕಾಮಿ ಬಲ್ಲನೆ ಶಿವಯೋಗದ ಸುಖವ? ರೋಗಿ ಬಲ್ಲನೆ ರಂಭಾರಸವ? ಗೂಗಿ ಬಲ್ಲುದೆ ಚಿತ್ಸೂರ್ಯನ ಬೆಳಗ? ಇಂತೆಂದುದಾಗಿ, ಲೋಕದ ದೃಷ್ಟದಂತೆ, ಹೊನ್ನು ಹೆಣ್ಣು ಮಣ್ಣು ಅನ್ನ ನೀರು ವಸ್ತ್ರ ಆಭರಣ ವಾಹನವೆಂಬ ಅಷ್ಟಾಮಲಂಗಳಲ್ಲಿ, ಅಷ್ಟಕಾಮವಿಕಾರದಿಂದ, ಮಾಯಾಪಾಶಬದ್ಧಮಲದಲ್ಲಿ ಬಿದ್ದು ತೊಳಲುವ ಜಡಜೀವಿಗಳೆತ್ತ ಬಲ್ಲರಯ್ಯ ನಿಮ್ಮ ಸರ್ವಾಚಾರಸಂಪತ್ತಿನಾಚರಣೆಯ, ನಿಜಸುಖದ ರಾಜಾಧಿರಾಜ ಶಿವಯೋಗದ ನಿಲುಕಡೆಯ? ಕೂಡಲಚೆನ್ನಸಂಗಮದೇವಾ.