Index   ವಚನ - 954    Search  
 
ಅಯ್ಯಾ ನಿಮ್ಮ ಭಕ್ತರಲ್ಲಿ ಹೊಲೆಸೂತಕವ ಕಲ್ಪಿಸುವಾತನೆ ಗುರುದ್ರೋಹಿ. ಜಂಗಮದಲ್ಲಿ ಜಾತಿಸೂತಕವನರಸುವಾತನೆ ಲಿಂಗದ್ರೋಹಿ. ಪ್ರಸಾದದಲ್ಲಿ ಎಂಜಲಸೂತಕವ ಭಾವಿಸುವಾತನೆ ಜಂಗಮದ್ರೋಹಿ. ಪಾದೋದಕದಲ್ಲಿ ಸಂಕಲ್ಪಸೂತಕವ ನೆನೆವಾತನೆ ಪ್ರಸಾದದ್ರೋಹಿ. ಈ ಚತುರ್ವಿಧದಲ್ಲಿ ಭಯ ಭಕ್ತಿ ನಿಷ್ಠೆ ಪ್ರೀತಿ ಪ್ರೇಮ ವಿಶ್ವಾಸವುಳ್ಳಾತನೆ ಭಕ್ತನು. ಈ ಚತುರ್ವಿಧದಲ್ಲಿ ಛಲ ನಿಷ್ಠೆ ದೃಢತರವಾದಾತನೆ ಮಾಹೇಶ್ವರನು, ಈ ಚತುರ್ವಿಧದಲ್ಲಿ ನಿಜಾವಧಾನವುಳ್ಳಾತನೆ ಪ್ರಸಾದಿ. ಈ ಚತುರ್ವಿಧದಲ್ಲಿ ತದ್ಗತಾನುಭಾವವುಳ್ಳಾತನೆ ಪ್ರಾಣಲಿಂಗಿ. ಈ ಚತುರ್ವಿಧದಲ್ಲಿ ನಿರ್ಣಯಾನಂದವುಳ್ಳಾತನೆ ಶರಣ. ಈ ಚತುರ್ವಿಧದಲ್ಲಿ ಸ್ಥಿರೀಕರಿಸಿ ಸಂದಳಿದೊಂದಾಗಿ ಕೂಡಿದಾತನೆ ಲಿಂಗೈಕ್ಯನು. ಈ ಚತುರ್ವಿಧದೊಳಗಡಗಿತು ಷಟ್ಸ್ಥಲವು. ಆತಂಗೆ ಸರ್ವವೂ ಸಾಧ್ಯವಹುದು. ಆತ ಲಿಂಗದೇಹಿ ಲಿಂಗಪ್ರಾಣಿ ಲಿಂಗಕಾಯನು. ಆತ ನಡೆಯಿತ್ತೇ ಬಟ್ಟೆ, ಆತ ನುಡಿದುದೇ ಶಿವಮಂತ್ರ, ಆತನಿರ್ದುದೇ ಶಿವಕ್ಷೇತ್ರ, ಆತ ನಿರ್ದೋಷಿ, ಕೂಡಲಚೆನ್ನಸಂಗಯ್ಯನಲ್ಲಿ ಆತನೆ ಸರ್ವಾಂಗಲಿಂಗಿ.