ಅಯ್ಯಾ, ಶ್ರೀಗುರು ಕರುಣಿಸಿಕೊಟ್ಟ
ಲಿಂಗ ಜಂಗಮವಲ್ಲದೆ,
ಅನ್ಯದೈವಂಗಳ ತ್ರೈಕರಣದಲ್ಲಿ
ಅರ್ಚಿಸದಿರ್ಪುದೆ
ಲಿಂಗಾಚಾರವೆಂಬೆನಯ್ಯಾ.
ಭಕ್ತನಾದಡೆ ಸತ್ಯಶುದ್ಧ ಕಾಯಕ[ವ ಮಾಡಿ],
ಮಹೇಶನಾದಡೆ ಸತ್ಯಶುದ್ಧ ಭಿಕ್ಷವ ಬೇಡಿ
ಸಮಸ್ತ ಪ್ರಾಣಿಗಳಲ್ಲಿ ಪಾತ್ರಾಪಾತ್ರವ
ತಿಳಿದು ಹಸಿವು ತೃಷೆ ಶೀತಕ್ಕೆ
ಪರಹಿತಾರ್ಥಿಯಾಗಿರ್ಪುದೆ
ಸದಾಚಾರವೆಂಬೆನಯ್ಯಾ.
ಗುರುಮಾರ್ಗಾಚಾರದಲ್ಲಿ ನಿಂದ
ಶಿವಲಾಂಛನಧಾರಿಗಳೆಲ್ಲಾ
ಪರಶಿವಲಿಂಗವೆಂದು ಭಾವಿಸಿ,
ಅರ್ಥ ಪ್ರಾಣಾಭಿಮಾನವನರ್ಪಿಸುವುದೆ
ಶಿವಾಚಾರವೆಂಬೆನಯ್ಯಾ.
ಅಷ್ಟಾವರಂಣಗಳ ಮೇಲೆ ಅನ್ಯರಿಂದ
ಕುಂದು ನಿಂದೆಗಳು ಬಂದು ತಟ್ಟಿದಲ್ಲಿ
ಗಣಸಮೂಹವನೊಡಗೂಡಿ ಆ ಸ್ಥಲವ ತ್ಯಜಿಸುವುದೆ
ಗಣಾಚಾರವೆಂಬೆನಯ್ಯಾ.
ಜಾತ್ಯಾಶ್ರಮ ಕುಲಗೋತ್ರ ನಾಮರೂಪ
ಕ್ರಿಯಾರಹಿತನಾಗಿ,
ಗುರೂಪಾವಸ್ಥೆಯಿಂದ ಗುರುವ ಪ್ರತ್ಯಕ್ಷವ ಮಾಡಿ,
ಆ ಗುರುವಿನಿಂದ ಚಿದ್ಘನ ಮಹಾಲಿಂಗವ ಪಡೆದು,
ಆ ಲಿಂಗಸಹಿತವಾಗಿ ಭಕ್ತಿಜ್ಞಾನವೈರಾಗ್ಯ
ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮೊದಲಾದ
ಷಟ್ಸ್ಥಲಮಾರ್ಗದಲ್ಲಿ ನಿಂದ ಭಕ್ತಗಣಂಗಳಲ್ಲಿ
ಪಂಚಸೂತಕಂಗಳ
ಕಲ್ಪಿಸದೆ ಅವರಿದ್ದ ಸ್ಥಳಕ್ಕೆ ಹೋಗಿ,
ತನುಮನಧನಂಗಳ ಸಮರ್ಪಿಸಿ,
ಅವರೊಕ್ಕುಮಿಕ್ಕುದ ಹಾರೈಸಿ
ಹಸ್ತಾಂಜಲಿತರಾಗಿ ಪ್ರತ್ಯುತ್ತರವ ಕೊಡದಿರ್ಪುದೆ
ಭೃತ್ಯಾಚಾರವೆಂಬೆನಯ್ಯಾ.
ಮಲ ಮಾಯಾ ಪಾತಕ ಸೂತಕ
ರಹಿತವಾದ ದೀಕ್ಷಾಗುರು,
ಶಿಕ್ಷಾಗುರು, ಜ್ಞಾನಗುರುವಿನಿಂದ
ವೇಧಾಮಂತ್ರ ಕ್ರಿಯಾದೀಕ್ಷೆಯ ಪಡೆದು,
ದ್ವಾದಶ ಮಲಪಾಶ ಕರ್ಮವ ತ್ಯಜಿಸಿ,
ಮನ ಮಾರುತ ಮೊದಲಾದ
ದ್ವಾದಶ ಇಂದ್ರಿಯಂಗಳ
ಗುರುಪಾದಜಲದಿಂದ ಪ್ರಕ್ಷಾಲಿಸಿ
ದಂತಪಂಕ್ತಿಕ್ರಿಯೆಗಳ ಮಾಡಿ,
ಕಟಿಸ್ನಾನ, ಕಂಠಸ್ನಾನ, ಮಂಡೆಸ್ನಾನ
ಸರ್ವಾಂಗಸ್ನಾನವ ಮಾಡಿ,
ಕ್ರಿಯಾಭಸಿತದಿಂದ ಸ್ನಾನ ಧೂಲನ
ಧಾರಣದ ಮರ್ಮವ ತಿಳಿದಾಚರಿಸಿ,
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ
ಷೋಡಷೋಪಚಾರದಿಂದ
ಗುರು-ಲಿಂಗ-ಜಂಗಮವನರ್ಚಿಸಿ,
ನಿರ್ವಂಚಕತ್ವದಿಂದ ಘನಪಾದತೀರ್ಥಪ್ರಸಾದ
ಮಂತ್ರದಲ್ಲಿ ನಿಂದ
ನಿಜಾವಸ್ಥೆಯ ಕ್ರಿಯಾಚಾರವೆಂಬೆನಯ್ಯಾ.
ಅಂತರಂಗದಲ್ಲಿ ಕರಣವಿಷಯ
ಕರ್ಕಶದಿಂದ ಅಹಂಕರಿಸಿ,
ಗುರುಹಿರಿಯರಲ್ಲಿ ಸಂಕಲ್ಪ ವಿಕಲ್ಪಗಳಿಂದ
ಕುಂದು-ನಿಂದೆ ಹಾಸ್ಯ-ರೋಷಂಗಳೆಂಬ
ಅಜ್ಞಾನವ ಬಳಸದೆ,
ಪರಮಪಾತಕರ ದರ್ಶನಸ್ಪರ್ಶನಸಂತರ್ಪಣೆ
ಪಂಕ್ತಿಪಾಕವ ಕೊಳ್ಳದೆ,
ಸತ್ಯ ನಡೆನುಡಿಯುಳ್ಳ ಶಿವಶರಣಗಣಂಗಳಲ್ಲಿ
ಷಡ್ವಿಧಭಕ್ತಿ ಮುಂದುಗೊಂಡು,
ಎರಡೆಂಬತ್ತೆಂಟುಕೋಟಿ ವಚನಾನುಭವದಲ್ಲಿ
ನಿಂದ ನಿಲುಕಡೆಯೆ ಜ್ಞಾನಾಚಾರವೆಂಬೆನಯ್ಯಾ.
ತನುವಿಕಾರದಿಂದ ಕಾಮ ಕ್ರೋಧ ಲೋಭ ಮೋಹ
ಮದ ಮತ್ಸರಂಗಳ ಬಳಕೆ ಮಾಡದೆ,
ಲೋಕದಂತೆ ನಡೆನುಡಿಗಳ ಬಳಸದೆ,
ತನ್ನ ಗುಣಾವಗುಣಂಗಳ
ಸ್ವಾತ್ಮಾನುಭವದಿಂದರಿದು,
ದುರ್ಗುಣವ ತ್ಯಜಿಸಿ, ಸದ್ಗುಣವ
ಹಿಡಿದು ಬಿಡದಿಪ್ಪುದೆ ಭಾವಾಚಾರವೆಂಬೆನಯ್ಯಾ.
ಕೊಡುವಲ್ಲಿ ಕೊಂಬಲ್ಲಿ ಅತಿಯಾಸೆಯಿಂದ
ಹುಸಿಯ ನುಡಿಯದೆ,
ಕೊಟ್ಟ ಭಾಷೆಗಳ ಪ್ರಾಣಾಂತ್ಯ ಬಂದಡೆಯೂ
ನುಡಿಯಂತೆ ನಡೆವುದೆ ಸತ್ಯಾಚಾರವೆಂಬೆನಯ್ಯಾ.
ಕಾಲ ಕಾಮರ ಬಾಧೆಗೊಳಗಾಗದ
ಹಠಯೋಗ ಫಲಪದಂಗಳ
ತಟ್ಟುಮುಟ್ಟು ಸೋಂಕುಗಳಿಲ್ಲದೆ
ಲಿಂಗಾಣತಿಯಿಂದ ಬಂದೊದಗಿದ
ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿರ್ಪುದೆ
ನಿತ್ಯಾಚಾರವೆಂಬೆನಯ್ಯಾ.
ಸರ್ವಾವಸ್ಥೆಯಲ್ಲಿ ದಶವಿಧಪಾದೋದಕ
ಏಕಾದಶಪ್ರಸಾದ ಛತ್ತೀಸ ಪ್ರಣವ
ಮೊದಲಾದ ಮಹಾಮಂತ್ರಂಗಳಲ್ಲಿ
ಎರಕವನುಳ್ಳುದೆ ಧರ್ಮಾಚಾರವೆಂಬೆನಯ್ಯಾ.
ಇಂತೀ ಏಕಾದಶವರ್ಮವ
ಗುರುಕೃಪಾಮುಖದಿಂದರಿದು,
ಆಚಾರವೆ ಅಂಗ ಮನ ಪ್ರಾಣ ಭಾವಂಗಳಾಗಿ,
ಇಹಪರವ ವಿೂರಿ,
ಪಿಂಡಾದಿ ಜ್ಞಾನಶೂನ್ಯಾಂತವಾದ
ಏಕೋತ್ತರಮಾರ್ಗದಲ್ಲಿ ನಿಂದು,
ಬಯಲೊಳಗೆ ಬಚ್ಚಬರಿಯ ನಿರ್ವಯಲ ಸಾಧಿಸುವುದೆ
ಸರ್ವಾಚಾರ ಸಂಪತ್ತಿನಾಚಾರದ ನಿಲುಕಡೆ ನೋಡಾ.
ಇಂತು ಆಚಾರದ ಕುರುಹ ತಿಳಿದು
ಪಂಚಾಚಾರವ ಬಹಿಷ್ಕರಿಸಿ
ಸಪ್ತಾಚಾರವ ಗೋಪ್ಯವ ಮಾಡಿ,
ದರಿದ್ರನಿಗೆ ನಿಧಿನಿಧಾನ ದೊರೆತಂತೆ,
ರೋಗಿಗೆ ವೈದ್ಯದ ಲತೆ ದೊರೆತಂತೆ,
ಮೂಕ ಫಲರಸವ ಸವಿದಂತೆ,
ಕಳ್ಳಗೆ ಚೇಳೂರಿದಂತೆ,
ತಮ್ಮ ಚಿದಂಗಸ್ವರೂಪರಾದ
ಶರಣಗಣಂಗಳಲ್ಲಿ ಉಸುರಿ,
ದುರ್ಜನಾತ್ಮರಲ್ಲಿ ಬಳಸದೆ ನಿಂದ
ಪರಮಸುಖಿ ನಿಮ್ಮ ಶರಣನಲ್ಲದೆ
ಉಳಿದ ಕಣ್ಗೆಟ್ಟಣ್ಣಗಳೆತ್ತ ಬಲ್ಲರಯ್ಯಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ayyā, śrīguru karuṇisikoṭṭa
liṅga jaṅgamavallade,
an'yadaivaṅgaḷa traikaraṇadalli
arcisadirpude
liṅgācāravembenayyā.
Bhaktanādaḍe satyaśud'dha kāyaka[va māḍi],
mahēśanādaḍe satyaśud'dha bhikṣava bēḍi
samasta prāṇigaḷalli pātrāpātrava
tiḷidu hasivu tr̥ṣe śītakke
parahitārthiyāgirpude
sadācāravembenayyā.
Gurumārgācāradalli ninda
śivalān̄chanadhārigaḷellā
paraśivaliṅgavendu bhāvisi,
artha prāṇābhimānavanarpisuvude
śivācāravembenayyā.
Aṣṭāvaraṇṇagaḷa mēle an'yarinda
kundu nindegaḷu bandu taṭṭidalli
gaṇasamūhavanoḍagūḍi ā sthalava tyajisuvude
gaṇācāravembenayyā.
Jātyāśrama kulagōtra nāmarūpa
kriyārahitanāgi,
gurūpāvastheyinda guruva pratyakṣava māḍi,
ā guruvininda cidghana mahāliṅgava paḍedu,
ā liṅgasahitavāgi bhaktijñānavairāgya
pādōdaka prasāda vibhūti rudrākṣi mantra modalāda
ṣaṭsthalamārgadalli ninda bhaktagaṇaṅgaḷalli
pan̄casūtakaṅgaḷa
kalpisade avaridda sthaḷakke hōgi,
tanumanadhanaṅgaḷa samarpisi,
Avarokkumikkuda hāraisi
hastān̄jalitarāgi pratyuttarava koḍadirpude
bhr̥tyācāravembenayyā.
Mala māyā pātaka sūtaka
rahitavāda dīkṣāguru,
śikṣāguru, jñānaguruvininda
vēdhāmantra kriyādīkṣeya paḍedu,
dvādaśa malapāśa karmava tyajisi,
mana māruta modalāda
dvādaśa indriyaṅgaḷa
gurupādajaladinda prakṣālisi
dantapaṅktikriyegaḷa māḍi,
Kaṭisnāna, kaṇṭhasnāna, maṇḍesnāna
sarvāṅgasnānava māḍi,
kriyābhasitadinda snāna dhūlana
dhāraṇada marmava tiḷidācarisi,
sākāra nirākāra aṣṭavidhārcane
ṣōḍaṣōpacāradinda
guru-liṅga-jaṅgamavanarcisi,
Nirvan̄cakatvadinda ghanapādatīrthaprasāda
mantradalli ninda
nijāvastheya kriyācāravembenayyā.
Antaraṅgadalli karaṇaviṣaya
karkaśadinda ahaṅkarisi,
guruhiriyaralli saṅkalpa vikalpagaḷinda
kundu-ninde hāsya-rōṣaṅgaḷemba
ajñānava baḷasade,
paramapātakara darśanasparśanasantarpaṇe
paṅktipākava koḷḷade,
satya naḍenuḍiyuḷḷa śivaśaraṇagaṇaṅgaḷalli
ṣaḍvidhabhakti mundugoṇḍu,
eraḍembatteṇṭukōṭi vacanānubhavadalli
ninda nilukaḍeye jñānācāravembenayyā.
Tanuvikāradinda kāma krōdha lōbha mōha
mada matsaraṅgaḷa baḷake māḍade,
Lōkadante naḍenuḍigaḷa baḷasade,
tanna guṇāvaguṇaṅgaḷa
svātmānubhavadindaridu,
durguṇava tyajisi, sadguṇava
hiḍidu biḍadippude bhāvācāravembenayyā.
Koḍuvalli komballi atiyāseyinda
husiya nuḍiyade,
koṭṭa bhāṣegaḷa prāṇāntya bandaḍeyū
nuḍiyante naḍevude satyācāravembenayyā.
Kāla kāmara bādhegoḷagāgada
haṭhayōga phalapadaṅgaḷa
taṭṭumuṭṭu sōṅkugaḷillade
liṅgāṇatiyinda bandodagida
pariṇāmaprasādadalli lōluptanāgirpude
Nityācāravembenayyā.
Sarvāvastheyalli daśavidhapādōdaka
ēkādaśaprasāda chattīsa praṇava
modalāda mahāmantraṅgaḷalli
erakavanuḷḷude dharmācāravembenayyā.
Intī ēkādaśavarmava
gurukr̥pāmukhadindaridu,
ācārave aṅga mana prāṇa bhāvaṅgaḷāgi,
ihaparava viūri,
piṇḍādi jñānaśūn'yāntavāda
ēkōttaramārgadalli nindu,
bayaloḷage baccabariya nirvayala sādhisuvude
sarvācāra sampattinācārada nilukaḍe nōḍā.
Intu ācārada kuruha tiḷidu
pan̄cācārava bahiṣkarisi
saptācārava gōpyava māḍi,
daridranige nidhinidhāna doretante,
rōgige vaidyada late doretante,
mūka phalarasava savidante,
kaḷḷage cēḷūridante,
tam'ma cidaṅgasvarūparāda
śaraṇagaṇaṅgaḷalli usuri,
durjanātmaralli baḷasade ninda
paramasukhi nim'ma śaraṇanallade
uḷida kaṇgeṭṭaṇṇagaḷetta ballarayyā
kūḍalacennasaṅgamadēvā.