Index   ವಚನ - 964    Search  
 
ಅರಮನೆಯ ಕೂಳನಾದಡೆಯೂ ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. 'ಅರ್ಪಿತಂ ಚ ಗುರೋರ್ವಾಕ್ಯಂ ಕಿಲ್ಬಿಷಂ ಸ್ಯಾದನರ್ಪಿತಮ್ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್' ಎಂದುದಾಗಿ ತನ್ನ ಒಡಲ ಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ, ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ, ತನುವಿನಲ್ಲಿ ಬೆರಸಿ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು, ಪಂಚಾಚಾರಯುಕ್ತನು ವೀರಶೈವ ಸಂಪನ್ನ, ಸರ್ವಾಂಗಲಿಂಗಿ ಸಂಗನಬಸವಣ್ಣನು, ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ, ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.