Index   ವಚನ - 1115    Search  
 
ಕತ್ತಲಮನೆಯಲ್ಲಿರ್ದ ಮನಜನು, ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ ಬೆಂಕಿಯ ಹೊತ್ತಿಸದನ್ನಕ್ಕ? ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ ಹತ್ತಿ ಹರಿಯದನ್ನಕ್ಕ? ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ? ಹಾಂಗೆ, ಸಮ್ಯಗ್‍ಜ್ಞಾನಾತ್ಮಕವಾದ ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ, ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವನು?