Index   ವಚನ - 1116    Search  
 
ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಶ್ವೇತವರ್ಣ ಗೌರವರ್ಣವೆಂಬ ಸಪ್ತಧಾತುಗಳು. ಇವಕ್ಕೆ ವಿವರ: ಕಪಿಲವರ್ಣದ ಧಾತು ಪೃಥ್ವಿ ಅಂಶ, ದೇಹವ ಅಳುಕಿಸುತ್ತಿಹುದು. ನೀಲವರ್ಣದ ಧಾತು ಅಪ್ಪುವಿನ ಅಂಶ, ದೇಹವ [ನಡುಗಿಸುಹುದು]. ಮಾಂಜಿಷ್ಟವರ್ಣದ ಧಾತು ಅಗ್ನಿ ಅಂಶ, ದೇಹ ಕನಸ ಕಾಣುತಿಹುದು. ಪೀತವರ್ಣದ ಧಾತು ವಾಯು ಅಂಶ, ದೇಹವತ್ತರ ಒತ್ತುತ್ತಿಹುದು. ಕಪ್ಪವರ್ಣದ ಧಾತು ಆಕಾಶದ ಅಂಶ, ಎತ್ತರ ತತ್ತರಗೆಡಹುತಿಹುದು. ಶ್ವೇತವರ್ಣದ ಧಾತು ಚಂದ್ರನ ಅಂಶ, ದೇಹ ಕಳವಳಿಸುತಿಹುದು. ಗೌರವರ್ಣದ ಧಾತು ಸೂರ್ಯನ ಅಂಶ, ಶರೀರ ಸಂಚಲಿಸುತಿಹುದು. ಇಂತೀ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ ಲಿಂಗಾರ್ಚನೆಯ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುತಿಹನು.