Index   ವಚನ - 1126    Search  
 
ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಕ್ಷೆಯಿಲ್ಲದಿರ್ದಡೆ ಕಕ್ಷೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅಪ್ಪಿಲ್ಲದಿರ್ದಡೆ ಉರಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅನ್ನಪಾನಾದಿಗಳಿಗೆ ಬಾಯ್ದೆರೆಯದಿರ್ದಡೆ, ಅಮಳೋಕ್ಯದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಭಿನ್ನಶಬ್ದವಿಲ್ಲದಿರ್ದಡೆ ಮುಖಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಲೋಕಕ್ಕೆರಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯಾ ಶಿವಲಿಂಗವ. ನಾಭಿಯಿಂದ ಕೆಳಯಿಕ್ಕೆ ಧರಿಸಲಾಗದು. ಅದೇನು ಕಾರಣವೆಂದಡೆ: ಅದು ಹೇಯಸ್ಥಾನವಾದುದಾಗಿ. ಜಿಹ್ವೆಗೆ ತಾಗಿದ ಸಕಲರುಚಿಯೂ ಗಳದಿಂದಿಳುವುದಾಗಿ ಗಳವೇ ವಿಶೇಷಸ್ಥಳವೆಂದು ಗಳದಲ್ಲಿ ಧರಿಸಿದೆನಯ್ಯಾ ಕೂಡಲಚೆನ್ನಸಂಗಮದೇವಾ.