Index   ವಚನ - 1221    Search  
 
ಗುರುವೆ ಸದಾಶಿವ, ಗುರುವೆ ಮಹಾಮಹಿಮ, ಗುರುವೆ ಅಕಲ್ಪಿತ ನಿತ್ಯ ನಿರವಯ. ಸಾಕಾರವಿಡಿದು ಗುರುಲಿಂಗವಾದ; ನಿರಾಕಾರವಿಡಿದು ಪ್ರಾಣಲಿಂಗವಾದ; ಉಭಯಸ್ಥಲ ಏಕವಾದಲ್ಲಿ ಭವವಿರಹಿತಭಕ್ತ ಜೀವನ್ಮುಕ್ತನಾದ. ಅಂತು ಗುರು ನಿಂದ ಸ್ಥಾನ, ಕಾಶೀಕ್ಷೇತ್ರ. ಗುರುಚರಣ ಪ್ರಕ್ಷಾಲನೋದಕವೆ ಗಂಗಾತೀರ್ಥ. ಗುರುಲಿಂಗ ಸಾಕ್ಷಾತ್ ಪರಶಿವನಿಂದ ವಿಶೇಷ. ಗುರುದರ್ಶನ ಪರಮಪೂಜೆ, ಗುರುಪಾದ ರುದ್ರಗಾಯತ್ರಿ; ಗುರುವಿನಿಂದತಿಶಯ ಫಲವೇನೂ ಇಲ್ಲ. ಕೂಡಲಚೆನ್ನಸಂಗಯ್ಯಾ, ಎನ್ನ ಪರಮಗುರು ಬಸವಣ್ಣನ ಶ್ರಿಪಾದಕ್ಕೆ ನಮೋ ನಮೋ ಎಂಬೆನು.