Index   ವಚನ - 1225    Search  
 
ಗುರುಸತ್ತಡೆ ಸಮಾಧಿಯ ಹೊಗಲೊಲ್ಲರಯ್ಯಾ; ಲಿಂಗಬಿದ್ದಡೆ ಸಮಾಧಿಯ ಹೊಕ್ಕಹೆವೆಂಬರು. ಗುರುವಿಂದ ಲಿಂಗವಾಯಿತ್ತೆ? ಲಿಂಗದಿಂದ ಗುರುವಾದನೊ? ಅದೆಂತೆಂದಡೆ: ಪೃಥ್ವಿಯಲ್ಲಿ ಹುಟ್ಟಿತ್ತು, ಕಲ್ಲುಕುಟಿಗನಿಂದ ರೂಪಾಯಿತ್ತು, ಗುರುವಿನ ಹಸ್ತದಿಂದ ಲಿಂಗವಾಯಿತ್ತು. ಇಂತೀ ಮೂವರಿಗೆ ಹುಟ್ಟಿದ ಲಿಂಗವ ಕಟ್ಟಿ ಜಗವೆಲ್ಲ ಭಂಡಾಯಿತ್ತು ನೋಡಿರೊ! ಅಣ್ಣಾ, ಲಿಂಗ ಬಿದ್ದಿತ್ತು ಬಿದ್ದಿತ್ತೆಂದು ನೋಯಲೇಕೆ? ಬಿದ್ದ ಲಿಂಗವನೆತ್ತಿಕೊಂಡು ಷೋಡಶೋಪಚಾರವ ಮಾಡುವುದು. ಹೀಗಲ್ಲದೆ ಶಸ್ತ್ರಸಮಾಧಿ ದುರ್ಮರಣವ ಮಾಡಿಕೊಂಡಿಹೆನೆಂಬ ಪಂಚಮಹಾಪಾತಕಂಗೆ ನಾಯಕನರಕ. ಲಿಂಗವು ಬೀಳಬಹುದೆ? ಭೂಮಿಯು ಆನಬಲ್ಲುದೆ? ಸದ್ಗುರುನಾಥನಿಲ್ಲವೆ? ಇಂತೀ ಕಟ್ಟುವ ತೆರನ, ಮುಟ್ಟುವ ಭೇದವ ಆರು ಬಲ್ಲರೆಂದಡೆ: ಈರೇಳು ಭುವನ, ಹದಿನಾಲ್ಕುಲೋಕದೊಡೆಯ ಪೂರ್ವಾಚಾರಿ ಕೂಡಲಚೆನ್ನಸಂಗಯ್ಯನಲ್ಲದೆ ಮಿಕ್ಕಿನ ಮಾತಿನ ಜ್ಞಾನಿಗಳೆತ್ತ ಬಲ್ಲರು?