Index   ವಚನ - 1244    Search  
 
ಜಂಗಮಮುಖದಲು ಲಿಂಗ ಸರ್ವಾಂಗವಾಯಿತ್ತಾಗಿ ಆರೋಗಿಸಿ ಕೊಡುವುದು ನೋಡಾ! ಜಂಗಮದಾಪ್ಯಾಯನವೆ ಲಿಂಗದಾಪ್ಯಾಯನ ನೋಡಾ! ಜಂಗಮತೃಪ್ತಿಯೆ ಲಿಂಗತೃಪ್ತಿ ನೋಡಾ! ಜಂಗಮವಾರೋಗಿಸಿ ಡರ್ರನೆ ತೇಗಿದಡೆ ಅಂಗೈಯಲೆರಗುವುದು ಮುಕ್ತಿ ನೋಡಾ. ಜಂಗಮಮುಖದಲು ತೃಪ್ತನಾದನೆಂದು `ಬಾರಯ್ಯಾ ಬಸವʼ ಎಂದು ಕೈವಿಡಿದು, ತೆಗೆದಪ್ಪಿ ಮುದ್ದಾಡಿ, ತಕ್ಕೈಸಿಕೊಂಡು, ನಿನ್ನ ಹೊರಗಿರಿಸಲಾರೆನೆಂದು ತನ್ನ ಹೃದಯಕಮಲದಲ್ಲಿ ಇಂಬಿಟ್ಟುಕೊಂಡು ಕೂಡಲಚೆನ್ನಸಂಗಯ್ಯಂಗೆ ಬಸವ ಪ್ರಾಣಲಿಂಗವಾದ.