ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು
ಪರದೇಶದೊಳಗಿಪ್ಪರೆಂಬ
ಭಾವದಲ್ಲಿ ಅಡಗಿದ ಆನಂದಕ್ಕಿಂತ
ಮನಮುಟ್ಟಿ ನೆನೆವುದರಿಂದಾದ
ಆನಂದ ಮಿಗಿಲಾಗಿಪ್ಪುದು ನೋಡಾ!
ಮನಮುಟ್ಟಿ ನೆನೆವುದರ ಸುಖಕ್ಕಿಂತ,
ಅವರನಪ್ಪಿ ಆಲಂಗಿಸುವುದರಿಂದಾದ
ಸುಖ ಅಧಿಕವಾಗಿ ತೋರ್ಪುದು ನೋಡಾ!
ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ
ಅವರೊಡನೆ ಸದಾ ಕೂಡಿಪ್ಪ ಹರ್ಷ
ಹಿರಿದಾಗಿಪ್ಪುದು ನೋಡಾ!
ಇಂತೀ ದೃಷ್ಟಾಂತದಂತೆ,
ಪರಶಿವ ಲಿಂಗವ ಭಾವದಲ್ಲಿ
ಭಾವಿಸುವುದಕ್ಕಿಂತ ಮನಮುಟ್ಟಿ ನೆನೆವುದು,
ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು,
ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು,
ಕರಮುಟ್ಟಿ ಪೂಜಿಸುವುದಕ್ಕಿಂತ
ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು,
ಪರಮಾವಧಿಯಾಗಿಪ್ಪುದು ನೋಡಾ!
ಇದು ಕಾರಣ, ಕೂಡಲಚೆನ್ನಸಂಗಯ್ಯನ ಶರಣರು
ಭಾವದಿಂದ ಮನಕ್ಕೆ, ಮನದಿಂದ ನೇತ್ರಕ್ಕೆ, ನೇತ್ರದಿಂದ ಕರಕ್ಕೆ
ಆ ಶಿವಲಿಂಗವ ಬಿಜಯಂಗೈಸಿಕೊಂಡು
ಪೂಜಾದಿ ಸತ್ಕ್ರಿಯೆಗಳನಗಲದೆ
ಅಲಸದೆ ಆಚರಿಸುತಿಪ್ಪರು.
Art
Manuscript
Music
Courtesy:
Transliteration
Tanna prītiya putra mitrādigaḷu
paradēśadoḷagipparemba
bhāvadalli aḍagida ānandakkinta
manamuṭṭi nenevudarindāda
ānanda migilāgippudu nōḍā!
Manamuṭṭi nenevudara sukhakkinta,
avaranappi ālaṅgisuvudarindāda
sukha adhikavāgi tōrpudu nōḍā!
Om'me appi ālaṅgisida ānandakkinta
avaroḍane sadā kūḍippa harṣa
hiridāgippudu nōḍā!
Intī dr̥ṣṭāntadante,
paraśiva liṅgava bhāvadalli
Bhāvisuvudakkinta manamuṭṭi nenevudu,
manamuṭṭi nenevudakkinta kaṇmucci kāṇuvudu,
kaṇmucci kāṇuvudakkinta karamuṭṭi pūjisuvudu,
karamuṭṭi pūjisuvudakkinta
sadā aṅgadalli hiṅgade dharisuva harṣavu,
paramāvadhiyāgippudu nōḍā!
Idu kāraṇa, kūḍalacennasaṅgayyana śaraṇaru
bhāvadinda manakke, manadinda nētrakke, nētradinda karakke
ā śivaliṅgava bijayaṅgaisikoṇḍu
pūjādi satkriyegaḷanagalade
alasade ācarisutipparu.