ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು,
ಗುರುಲಿಂಗಜಂಗಮಕ್ಕೆ ವೆಚ್ಚಿಸಿ,
ದಾಸೋಹವ ಮಾಡಿ,
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ.
ಅದೇಕೆಂದರೆ: ಅವ ಪರಧನ ಚೋರಕ; ಅವ ಪಾಪಿ,
ಅವಗೆ ವಿಚಾರಿಸದೆ ಉಪದೇಶವ ಕೊಟ್ಟ
ಗುರುವಿಂಗೆ ರೌ್ರವ ನರಕ.
ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ.
ಇಂತಹರ ಬದುಕು, ಹುಲಿ ಕಪಿಲೆಯ ತಿಂದು
ಮಿಕ್ಕುದ ನರ ಬಂದು ತಿಂಬಂತೆ ಕಾಣಾ.
ಕೂಡಲಚೆನ್ನಸಂಗಮದೇವಾ.