Index   ವಚನ - 1295    Search  
 
ತಾವು ಗುರುವೆಂದು ಮುಂದಣವರಿಗನುಗ್ರಹವ ಮಾಡುವರಯ್ಯಾ, ತಾವು ಗುರುವೆಂತಾದರೊ ! ಎಲ್ಲರಿಗೆಯೂ ಒಂದೇ ದೇಹ. "ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಕಾಯಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಯಂ" ಎಂದುದಾಗಿ, ಗುರುವೆಂಬುದು ತಾನು ಪರುಷವು ಆ ಪರುಷವು ಮುಟ್ಟಲೊಡನೆ ಉಳಿದ ಲೋಹಂಗಳು ಸುವರ್ಣವಾದುವಲ್ಲದೆ, ಆ ಪರುಷವೆ ಆಗಲರಿಯವು-ಅದು ಗುರುಸ್ಥಲವಲ್ಲ ನಿಲ್ಲು ಮಾಣು. ಗುರುವೆಂಬುದು ತಾನು ಸ್ವಯಂ ಜ್ಯೋತಿಪ್ರಕಾಶವು, ಅಂತಪ್ಪ ಸ್ವಯಂಜ್ಯೋತಿ ಪ್ರಕಾಶವ ತಂದು ಪರಂಜ್ಯೋತಿಯ ಹೊತ್ತಿಸಿದಡೆ, ಆ ಜ್ಯೋತಿ ತನ್ನಂತೆ ಮಾಡಿತ್ತು. ಅದಾವ ಜ್ಯೋತಿಯೆಂದಡೆ ಪಶ್ಚಿಮ ಜ್ಯೋತಿ. ಆ ಪಶ್ಚಿಮ ಜ್ಯೋತಿಯ ಬೆಳಗಿನಿಂದ ಪ್ರಾಣಲಿಂಗವ ಕಂಡು ಸುಖಿಯಾದೆನು. ನಾಲ್ಕು ವೇದಾರ್ಥ: ಅಜಪಗಾಯತ್ರಿ. ಅಜಪಗಾಯತ್ರಿಯರ್ಥ: ಪ್ರಾಣಾಯಾಮ. ಪ್ರಾಣಾಯಾಮದಿಂದ ಪ್ರಾಣಲಿಂಗ ಸಂಬಂಧವ ಮಾಡೂದು. ಇಷ್ಟರಲ್ಲಿ ತಾನು ಸ್ವತಂತ್ರನಾದಡೆ, ಇಷ್ಟಲಿಂಗವನಾರಿಗಾದರೂ ಕೊಡುವುದು. ಇಲ್ಲದಿದ್ದರೆ ಅಂಧಕನ ಕೈಯ ಹೆಳವ ಹಿಡಿದಂತೆ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.