Index   ವಚನ - 1329    Search  
 
ನಾದದಿಂದಾದ ಸಂಗ ವಿನೋದಸಂಗ, ಬಿಂದುವಿನಿಂದಾದ ಸಂಗ ಬದ್ಧಕ್ರೀ. ದ್ವಯ, ಅದ್ವಯದಿಂದಾದ ಸಂಗ ಪರಿಭಾವ. ಗಮಿಸುವುದೆ ನಿರವಯವು, ಬಯಸದಿರಾ! ಬೇರೆ ಮತ್ತಿಲ್ಲ, ಅನುಭಾವವೆಂಬ ಘನಮಹಿಮೆಯ ನೆಮ್ಮಿತ್ತೆ ಆಯಿತ್ತು; ಆ ನಾದದ ನಿಶ್ಚಿಂತನಿಲವನರಿಯಿತ್ತೆ ಆಯಿತ್ತು. ಇದು ನಿಮ್ಮ ಕಲ್ಪನೆ, ಆದಿ ಅಂತ್ಯವ ಬಲ್ಲಡೆ, ಬಲ್ಲನು. ಅವಚಿತ್ತದ ಅವಧಾನದ, ಅಹುದೆಂಬ ಅಲ್ಲವೆಂಬ, ಉಂಟೆಂಬ ಇಲ್ಲವೆಂಬ ಈ ಎರಡರ ಮಥನವಲ್ಲ ಕೇಳಿರಯ್ಯಾ. ಚೆಂದಗೆಡದ ಮುನ್ನ ಬೇಗಮಾಡಿ ತಿಳಿದಿರಾದಡೆ ಬಸವನಂತೆ ಭಾವ, ಬಸವನಂತೆ ಮನ, ಬಸವನ ಪದವಿಡಿದಡೆ ಇದೇ ಪಥ ಕಾಣಾ ಕೂಡಲಚೆನ್ನಸಂಗಮದೇವಾ.