Index   ವಚನ - 1332    Search  
 
ನಾನು ಭಕ್ತ, ನಾನು ಮಾಹೇಶ‍್ವರ, ನಾನು ಪ್ರಸಾದಿ, ನಾನು ಪ್ರಾಣಲಿಂಗಿ, ನಾನು ಶರಣ, ನಾನು ಐಕ್ಯನೆಂದು ಹೇಳಿಕೊಳ್ಳುವ ಮಾನ್ಯರ ನೋಡಿ ಎನ್ನ ಮನವು ನಾಚಿತ್ತು ನೋಡಾ. ಗೇಹ, ಸತಿ, ಪುತ್ರಾದಿಗಳಲ್ಲಿ ನಾನು ನನ್ನದೆಂಬ ಹಮ್ಮ ಬಿಮ್ಮ ಬಿಡದನ್ನಕ್ಕರ ಭಕ್ತನಲ್ಲ ನೋಡಾ. ಅಂತಪ್ಪ ದೇಹಾದಿ ಪ್ರಪಂಚದಲ್ಲಿ ಹರಿದಾಡುವ ಮನವು ನಿಂದು ನಿರ್ಮಲವಾಗದನ್ನಕ್ಕರ ಪ್ರಸಾದಿಯಲ್ಲ ನೋಡಾ. ದೇಹ ಕರಣೇಂದ್ರಿಯಂಗಳ ಮರೆದು ಲಿಂಗದಲ್ಲಿ ಮನವು ಲೀಯವಾಗದನ್ನಕ್ಕರ ಪ್ರಾಣಲಿಂಗಿಯಲ್ಲ ನೋಡಾ. ಶಿವಲಿಂಗವೇ ನಿತ್ಯವು, ದೇಹಾದಿ ಪ್ರಪಂಚ ಅನಿತ್ಯವೆಂದು ನಿಶ್ಚಯಗೊಂಡು ಸದಾ ಲಿಂಗಾನಂದದಲ್ಲಿ ಒಡಗೂಡಿದನ್ನಕ್ಕರ ಶರಣನಲ್ಲ ನೋಡಾ, ಶಿವಲಿಂಗವು ಬೇರೆ, ತಾನು ಬೇರೆಯೆಂಬ ಭೇದಭ್ರಾಂತಿಯ ನೀಗಿ ಸ್ವಯಮೇವ ತಾನೇ ಲಿಂಗವಾಗದನ್ನಕ್ಕರ ಐಕ್ಯನಲ್ಲ ನೋಡಾ. ಇಂತಪ್ಪ ಷಟ್ ಸ್ಥಲಂಗಳ ನಿಲವನರಿತಲ್ಲದೆ ಕೂಡಲಚೆನ್ನಸಂಗಯ್ಯನಲ್ಲಿ ಕೂಡಲರಿಯರು ನೋಡಾ.