ನಿಮ್ಮ ಜಂಗಮವ ಕಂಡು ಉದಾಸೀನವ ಮಾಡಿದಡೆ,
ಒಂದನೆಯ ಪಾತಕ.
ನಿಮ್ಮ ಜಂಗಮದ ಸಮಯೋಚಿತವ ನಡೆಸದಿದ್ದಡೆ,
ಎರಡನೆಯ ಪಾತಕ.
ನಿಮ್ಮ ಜಂಗಮದ ಕೂಡೆ ಮಾರುತ್ತರವ ಕೊಟ್ಟಡೆ,
ಮೂರನೆಯ ಪಾತಕ.
ನಿಮ್ಮ ಜಂಗಮದ ಸಕಲಾರ್ಥಕ್ಕೆ ಸಲ್ಲದಿದ್ದಡೆ,
ನಾಲ್ಕನೆಯ ಪಾತಕ.
ನಿಮ್ಮ ಜಂಗಮಕ್ಕೆ ಮಾಡಿದೆನೆಂದು ಮನದಲ್ಲಿ ಹೊಳೆದಡೆ,
ಐದನೆಯ ಪಾತಕ.
ನಿಮ್ಮ ಜಂಗಮವು ಅಂಥವರಿಂಥವರೆಂದು ನುಡಿದಡೆ,
ಆರನೆಯ ಪಾತಕ.
ನಿಮ್ಮ ಜಂಗಮವೆ ಲಿಂಗವೆಂದು ನಂಬದಿದ್ದಡೆ,
ಏಳನೆಯ ಪಾತಕ.
ನಿಮ್ಮ ಜಂಗಮದ ಕೂಡೆ ಸುಖಸಂಭಾಷಣೆಯ ಮಾಡದಿದ್ದಡೆ,
ಎಂಟನೆಯ ಪಾತಕ.
ನಿಮ್ಮ ಜಂಗಮಕ್ಕೆ ಸಕಲ ಪದಾರ್ಥವ ನೀಡದೆ,
ತನ್ನ ಲಿಂಗಕ್ಕೆ ಕೊಡುವುದು ಒಂಬತ್ತನೆಯ ಪಾತಕ.
ನಿಮ್ಮ ಜಂಗಮದ ಪಾದೋದಕ ಪ್ರಸಾದವನು ತಂದು,
ತನ್ನ ಲಿಂಗಕ್ಕೆ ಕೊಟ್ಟು ಕೊಳದಿಹುದು ಹತ್ತನೆಯ ಪಾತಕ.
ಇಂತೀ ಹತ್ತು ಪಾತಕವ ಕಳೆದಲ್ಲದೆ
ಭಕ್ತನಲ್ಲ, ಮಹೇಶ್ವರನಲ್ಲ, ಪ್ರಸಾದಿಯಲ್ಲ,
ಪ್ರಾಣಲಿಂಗಿಯಲ್ಲ,
ಶರಣನೈಕ್ಯನೆಂತೂ ಆಗಲರಿಯ.
ಇದು ಕಾರಣ, ಕೂಡಲಚೆನ್ನಸಂಗಮದೇವಾ
ಭಕ್ತಹೀನ ಜಡಜೀವಿಗಳು ನಿಮಗೆಂದೂ ದೂರವಯ್ಯಾ.