Index   ವಚನ - 1390    Search  
 
ಪೃಥ್ವಿ ಅಪ್ಪು ತೇಜ ವಾಯು, ಆಕಾಶ- ಇಂತೀ ಪಂಚಭೂತದಿಂದ ಒದಗಿದ ತನುವಿನ ಭೇದವ ನೋಡಿರೆ ಅಯ್ಯಾ. ಐದರ ವಿಶ್ರಾಂತಿಯಲ್ಲಿಯೆ ತನು ಸವೆದು ಹೋಗುತ್ತಿರಲು ಮತ್ತೆ ದೇವರ ಕಂಡೆನೆಂದರೆ ತನುವೆಲ್ಲಿಯದೊ? ಅಕ್ಕಟಕ್ಕಟಾ ಲಿಂಗವೆ! ಜಡದೇಹಿಗಳೆಲ್ಲಾ ಜಡವನೆ ಪೂಜಿಸಿ ಹತ್ತಿದರಲ್ಲಾ ಕೈಲಾಸದ ಬಟ್ಟೆಯ ಹೋ ಹೋ ಅಲ್ಲಿಯೂ ಪ್ರಳಯ ಬಿಡದು! ನಾ ನನ್ನ ಅಚಲಲಿಂಗವ ಸೋಂಕಿ, ಸ್ವಯಾನುಭಾವ ಸಮ್ಯಕ್‍ಜ್ಞಾನದಿಂದ ಕೈಲಾಸದ ಬಟ್ಟೆ ಹಿಂದಾಗಿ, ನಾ ಬಯಲಾದೆ ಕಾಣಾ ಕೂಡಲಚೆನ್ನಸಂಗಮದೇವಾ.