Index   ವಚನ - 1457    Search  
 
ಭಕ್ತರ ಹೆಚ್ಚು ಕುಂದು ಜಂಗಮದ ಹೆಚ್ಚು ಕುಂದೆಂಬುದನರಿಯಾ ಪ್ರಭುವೆ? ನಿಮ್ಮ ಪ್ರಾಣವೆ ಬಸವಣ್ಣನ ಪ್ರಾಣ, ಬಸವಣ್ಣನ ಪ್ರಾಣವೆ ನಿಮ್ಮ ಪ್ರಾಣ ನಿಮ್ಮ ಕಾಯವೆ ಬಸವಣ್ಣನ ಕಾಯ, ಬಸವಣ್ಣನ ಕಾಯವೆ ನಿಮ್ಮ ಕಾಯ. ನೀವಿಲ್ಲದಿರೆ ಬಸವಣ್ಣನಿಲ್ಲ, ಬಸವಣ್ಣನಿಲ್ಲದಿರೆ ನೀವಿಲ್ಲ. ಇಂತಿದನೊಂದು ಬಿಚ್ಚಿ ಬೇರೆ ಮಾಡಬಾರದೆಂಬುದನರಿದು ಮತ್ತೆ ಬರಿದೆ ಮುನಿವರೆ ಬಲ್ಲವರು? ನಡೆವ ವಾರುವ ಮುಗ್ಗಿದಡೆ ನಡೆಸಿಕೊಂಬುದಲ್ಲದೆ ಮಿಡಿ ಹರಿಯೆ ಹೊಯ್ದವರುಂಟೆ ಲೋಕದೊಳಗೆ? ಮರಹಿಂದ ಬಂದ ಅವಗುಣವ ಸಂಪಾದಿಸದೆ ಬಿಜಯಂಗೈಯ್ವುದಯ್ಯಾ ನಿಮ್ಮ ಗೃಹಕ್ಕೆ. ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಬಸವಣ್ಣನಾರೆಂಬುದ ನೀನೊಮ್ಮೆ ತಿಳಿದು ನೋಡಾ ಪ್ರಭುವೆ.