Index   ವಚನ - 1458    Search  
 
ಭಕ್ತರಾದೆವೆಂಬರು ಭಕ್ತಿಯ ಪರಿಯನರಿಯರು. ಭಕ್ತರೆಂತಾದಿರಯ್ಯಾ? ಮಾಹೇಶ್ವರರಾದೆವೆಂಬರು, ಆದಿ ಅನಾದಿಯ ಅರಿಯದನ್ನಕ್ಕ ಮಾಹೇಶ್ವರರೆಂತಾದಿರಯ್ಯಾ? ಪ್ರಸಾದಿಗಳಾದೆವೆಂಬರು, ಪ್ರಸಾದದ ಅರ್ಪಿತ ಆಯತವನರಿಯದೆ ಪ್ರಸಾದವ ಗ್ರಹಿಸುವನ್ನಕ್ಕ ಪ್ರಸಾದಿಗಳೆಂತಾದಿರಯ್ಯಾ? ಪ್ರಾಣಲಿಂಗಿಗಳಾದೆವೆಂಬರು, ನಡೆ ನುಡಿ ಭಾವ ಎರಡಾಗಿದೆ ಪ್ರಾಣಲಿಂಗಿಗಳೆಂತಾದಿರಯ್ಯಾ? ಶರಣನಾದೆವೆಂಬರು, ಇಂದ್ರಿಯಂಗಳ ಭಿನ್ನವಿಟ್ಟು ವರ್ತಿಸುವನ್ನಕ್ಕ ಶರಣರೆಂತಾದಿರಯ್ಯಾ? ಐಕ್ಯವಾದೆವೆಂಬರು ಧರ್ಮಕರ್ಮ ಚತುರ್ವಿಧದ ಫಲಪದ ಮೋಕ್ಷ ಜನನ ಮರಣ ಬೆನ್ನ ಬಿಡದೆ ಐಕ್ಯರೆಂತಾದಿರಯ್ಯಾ? ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.