Index   ವಚನ - 1460    Search  
 
ಭಕ್ತಿ ಜ್ಞಾನ ವೈರಾಗ್ಯ ಕುಲಸ್ಥಲವ ಹರಹಲೆಂದು ಮರ್ತ್ಯಲೋಕಕ್ಕೆ ಇಳಿತಂದನಯ್ಯಾ ಬಸವಣ್ಣನು. ವ್ರತಾಚಾರದ ಶಿವಾಚಾರದ ಮುಂದಣ ಕನ್ನಡಕವ ಕಳೆದು ಕರತಳಾಮಳಕ ಮಾಡಿದನಯ್ಯಾ ಬಸವಣ್ಣನು. ಪರವಾದಿ ಬಿಜ್ಜಳನ ಒರೆಗಲ್ಲ ಹಿಡಿದು ಶಿವಭಕ್ತಿಸಂಪಾದನೆಯ ಮಾಡುವಲ್ಲಿ ಮೂವತ್ತಾರು ಕೊಂಡೆಯ ಪರಿಹರಿಸಿ ಶಿವಾಚಾರದ ಧ್ವಜವನೆತ್ತಿ ಮೆರೆದನಯ್ಯಾ ಬಸವಣ್ಣನು- ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನ ನಿಲವ ಹೊಗಳುವುದು ಎನ್ನಳವಲ್ಲ ನಿನ್ನಳವಲ್ಲ.