ಭವಿಯ ಮನೆಯಲ್ಲಿ ಭವಿಯ ಹಸ್ತದಲ್ಲಿ ಭವಿಪಾಕವಲ್ಲದೆ,
ಭಕ್ತರ ಮನೆಯಲ್ಲಿ ಭಕ್ತರ ಹಸ್ತದಲ್ಲಿ ಭವಿಪಾಕವುಂಟೆ?
ಇಲ್ಲ ಇಲ್ಲ. ಸುಡಲಿವದಿರ ಭಕ್ತಿಯೆಂತಹುದೊ,
ಯುಕ್ತಿಯಂತಹುದೊ, ಶೀಲವೆಂತಹುದೊ!
ಸದ್ಭಕ್ತಿಯಿಂದ ಮಾಡಿ ನೀಡುವ ಭಕ್ತನು
ಭಕ್ತದೇಹಿಕದೇವ, ಆತ ತಾನೆ ಪರಶಿವನು.
ಆ ಭಕ್ತನ ಹಸ್ತದಿಂದ ಬಂದ ದ್ರವ್ಯಪದಾರ್ಥಂಗಳೆಲ್ಲವೂ
ಪ್ರಸನ್ನತ್ವದಿಂದ ಬಂದುವಾಗಿ ಪ್ರಸಾದ,
ಲಿಂಗಕ್ಕೆ ಕೊಟ್ಟು ಕೊಂಬುದು.
ಅದು ತಾನೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವು.
ಆ ಮಹಿಮನು ಭಕ್ತದೇಹಿಕದೇವನೆಂದು
ಭಾವಶುದ್ಧಿಯಿಂದ ಪ್ರಸಾದವ ಕೊಂಡಡೆ,
ಅದೇ ಮಹಾಪ್ರಸಾದ ಕೂಡಲಚೆನ್ನಸಂಗಯ್ಯಾ.