ಮಲವಿಶಿಷ್ಟರಾದ ಮಾನವರು ಬಹಿರಂಗದ ತೀರ್ಥವ ಹೊಕ್ಕು,
ಅಲ್ಲಿ ಕಾಲು ಕೈ ಮುಂತಾದ ಸರ್ವಾಂಗವ ತೊಳೆದು,
ಪರಿಶುದ್ಧರಾದೆವೆಂದು ಭಾವಿಸುತಿಪ್ಪರು ನೋಡಾ.
ಮತ್ತೆ ಆ ಮಲಿನವಾದ ಜಲವನೆ ತೀರ್ಥವೆಂದು
ಲಿಂಗಕ್ಕಭಿಷೇಕಂಗೆಯ್ಯುತಿಪ್ಪರು ನೋಡಾ.
ಶಿವಜ್ಞಾನಿಗಳ ಪಾದೋದಕವು ಪರಿಶುದ್ಧವಲ್ಲವೆಂದು
ಗಳಹುತಿಪ್ಪರು ನೋಡಾ.
ಇಂತೀ ಮರುಳರಾಟವ ಕಂಡು,
ನಮ್ಮ ಪ್ರಮಥರು ಗಹಗಹಿಸಿ ನಗುತಿಪ್ಪರು ನೋಡಾ
ಕೂಡಲಚೆನ್ನಸಂಗಮದೇವಾ.