Index   ವಚನ - 1572    Search  
 
ಲಿಂಗದೊಡನೆ ಸಹಭೋಜನವ ಮಾಡುವ ಅದ್ವೈತಿಗಳ ಮಾತುಕೇಳಿ, ಸಂಸಾರದೊಳಗಿರ್ದ ಭಕ್ತನು, ಆ ಲಿಂಗದೊಡನೆ ಸಹಭೋಜನವ ಮಾಡಿದಡೆ ಅಘೋರನರಕ ತಪ್ಪದು. ಅದೆಂತೆಂದಡೆ: "ರಾಗದ್ವೇಷಮದೋನ್ಮತ್ತಸ್ತತ್ತ್ವಜ್ಞಾನಪರಾಙ್ಮುಖಃ| ಸಂಸಾರಸ್ಯ ಮಹಾಪಂಕೇ ಜೀರ್ಣಾಂಗೋ ಹಿ ನಿಮಜ್ಜತಿ"|| ಇದನರಿದು ಲಿಂಗದೊಡನೆ ಸಹಭೋಜನವ ಮಾಡಲಾಗದು. ಮಾಡುವ ಅಜ್ಞಾನಿಗಳು ನೀವು ಕೇಳಿರೊ: ಗುರುಲಿಂಗಜಂಗಮತ್ರಿವಿಧವನು ಏಕಾರ್ಥವ ಮಾಡದನ್ನಕ್ಕರ ಸಹಭೋಜನವುಂಟೆ ಹೇಳಿರಣ್ಣಾ! ಇಲ್ಲವಾಗಿ. ಅದೆಂತೆಂದಡೆ: "ಗುರುರೇಕೋ ಲಿಂಗಮೇಕಂ ಏಕಾರ್ಥೋ ಜಂಗಮಸ್ತಥಾ| ತ್ರಿವಿಧೇ ಭಿನ್ನಭಾವೇನ ಶ್ವಾನಯೋನಿಷು ಜಾಯತೇ"|| ಇಂತೆಂಬ ಶಿವನವಾಕ್ಯವನರಿಯದೆ, ನೀವೇ ಲಿಂಗವೆಂಬಿರಿ, ಲಿಂಗವೆ ನೀವೆಂಬಿರಿ, ಜನನ-ಮರಣ, ತಾಗು-ನಿರೋಧ ಉಳ್ಳನ್ನಕ್ಕರ ನೀವೆಂತು ಲಿಂಗವಪ್ಪಿರಿ ಹೇಳಿರಣ್ಣಾ? ಆ ಶಿವಜ್ಞಾನದ ಮಹಾವರ್ಮವನರಿಯದೆ ಲಿಂಗದೊಡನೆ ಸಹಭೋಜನವ ಮಾಡಿದೊಡೆ ಅಘೋರನರಕದಲ್ಲಿಕ್ಕದೆ ಬಿಡುವನೆ ನಮ್ಮ ಕೂಡಲಚೆನ್ನಸಂಗಮದೇವನು.