Index   ವಚನ - 1592    Search  
 
ಲಿಂಗೋದಕ ಪಾದೋದಕ, ಪ್ರಸಾದೋದಕವೆಂದು ತ್ರಿವಿಧ: ಲಿಂಗೋದಕವೆಂಬುದು ಶಿವಸಂಸ್ಕಾರದಿಂದಾದುದು, ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು, ಪ್ರಸಾದೋದಕವೆಂಬುದು ಲಿಂಗವಾರೋಗಿಸಿದ ಬಳಿಕ ಸಿತಾಳಂಗೊಟ್ಟುದು. ಲಿಂಗೋದಕದಲ್ಲಿ ಲಿಂಗಕ್ಕೆ ಪಾಕಪ್ರಯತ್ನ, ಮಜ್ಜನಕ್ಕೆರೆವುದು. ಪಾದೋದಕದಲ್ಲಿ ಮುಖಪಕ್ಷಾಲನವ ಮಾಡುವುದು, ಶಿರಸ್ಸಿನ ಮೇಲೆ ತಳಿದುಕೊಂಬುದು. ಪ್ರಸಾದೋದಕವನಾರೋಗಿಸುವುದು ಇಂತೀ ತ್ರಿವಿಧೋದಕ. ದಾಸೋಹ ಷಟ್‍ಪ್ರಕಾರ ವರ್ತಿಸುವುದು. ಭಕ್ತನಿಂದೆಯ ಮಾಡಲಾಗದು, ಆಚಾರನಿಂದೆಯ ಮಾಡಲಾಗದು. ಹುಸಿಯಿಲ್ಲದಿದ್ದಡೆ ಭಕ್ತನು- ಇಂತಿದು ಭಕ್ತಸ್ಥಲ ಕೂಡಲಚೆನ್ನಸಂಗಮದೇವಾ.