Index   ವಚನ - 1648    Search  
 
ಶಿವ ಶಿವಾ ಆವನಾನೊಬ್ಬನು ಶ್ರೀಮಹಾದೇವನ ದಿವ್ಯಕಾಂತಿಯಿಂದೊಗೆದ ಶ್ರೀಮಹಾಭಸಿತವ ಬಿಟ್ಟು ಹಣೆಯಲ್ಲಿ ಗೋಪಿ ಮಲಿನ ಸಾದು ಕಸ್ತೂರಿ ಚಂದನಗಳೆಂಬ ಮಣ್ಣುಮಸಿಗಳಿಂದ ನೀಳ ಬೊಟ್ಟು, ಕಾಗೆವರೆಬೊಟ್ಟು, ಹೂಬೊಟ್ಟು ಅರ್ಧಚಂದ್ರರೇಖೆ, ಅಂಕುಶದ ರೇಖೆ ಮೊದಲಾದ ಕಾಕುವರೆಗಳ ವಿಶ್ವಾಸದಿಂದ ಇಡುತಿಪ್ಪ ಪಾತಕರ ಮುಖವ ನೋಡಲಾಗದು. ಸುಡು! ಅದು ಅಶುದ್ಧ, ಅದು ಪಾಪದ ರಾಶಿ, ಅದ ನೋಡಿದಡೆ ಮಹಾದೋಷ. ಅದೆಂತೆಂದಡೆ, ಪಾರಾಶರಪುರಾಣದಲ್ಲಿ: “ಊರ್ಧ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ” ಮತ್ತಂ ಶಾಂಭವಪುರಾಣದಲ್ಲಿ: “ಅಶುದ್ಧಂ ಚ ತಥಾ ಪ್ರೋಕ್ತಂ ವರ್ತುಲಂ ಚೋರ್ಧ್ವಪುಂಡ್ರಕಂ ಅಶುದ್ಧಂ ಚಾರ್ಧಚಂದ್ರಂ ಚ ಕೀರ್ತಿತಂ ತು ಕುಶಾದಿಭಿಃ” ಮತ್ತಂ ಸೂತಸಂಹಿತೆಯಲ್ಲಿ: “ಅಶ್ರೌತಂ ಚೋರ್ಧ್ವಪುಂಡ್ರಂ ತು ಲಲಾಟೇ ಶ್ರದ್ಧಯಾ ಸಹ ಧಾರಯಿಷ್ಯಂತಿ ಮೋಹೇನ ಪಾಷಂಡೋಪಹತಾ ಜನಾಃ ಮತ್ತಂ ಮಾನವಪುರಾಣದಲ್ಲಿ: “ಊರ್ಧ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಚಂದ್ರಕಂ ತತ್ತ್ವನಿಷ್ಠೈರ್ನ ಧಾರ್ಯಂ ಚ ನ ಧಾರ್ಯಂ ವೈದಿಕೈರ್ಜನೈಃ ಊರ್ಧ್ವಪುಂಡ್ರಂ ಮುಖಂ ದೃಷ್ಟ್ವಾ ವ್ರತಂ ಚಾಂದ್ರಾಯಣಂ ಚರೇತ್” ಮತ್ತಂ ಸ್ಕಂದಪುರಾಣದಲ್ಲಿ: ಊರ್ಧ್ವಪುಂಡ್ರಂ ದ್ವಿಜಃ ಕುರ್ಯಾನ್ನ ಲೀಲಯಾsಪಿ ಕದಾಚನ ತದಾಕಾರೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈ” ಎಂದುದಾಗಿ, ಶ್ರೀಮಹಾವಿಭೂತಿಯ ಬಿಟ್ಟು ವೇದವಿರುದ್ಧವಾದ ಮಟ್ಟಿಮಸಿಗಳ ಹಣೆಯಲ್ಲಿ ಇಡುತಿಪ್ಪ ಪಂಚಮಹಾಪಾತಕರ ಮುಸುಡ ನೋಡಲಾಗದು ಕಾಣಾ ಕೂಡಲಚೆನ್ನಸಂಗಮದೇವಾ.