Index   ವಚನ - 1666    Search  
 
ಶ್ರೀಗುರು ಉಪದೇಶವ ಮಾಡುವಲ್ಲಿ ಭಕ್ತಗಣಸಾಕ್ಷಿಯಾಗಿ ಹಸ್ತಮಸ್ತಕ ಸಂಯೋಗವ ಮಾಡಿ, ಆ ಮಸ್ತಕಾಗ್ರದೊಳಿಪ್ಪ ನಿತ್ಯನಿರಂಜನ ಶಿವಕಳೆಯ ಭಾವದೊಳು ಭರಿತವೆನಿಸಿ, ಮನದೊಳು ಮಂತ್ರಯುಕ್ತದಿಂ ಮೂರ್ತಿಗೊಳಿಸಿ, ಚರಪಾದತೀರ್ಥಪ್ರಸಾದದೊಳು ಬೆರಸಿ- ಇಂತೀ ಗುರುಚರಪರರಾಜ್ಞೆಯಲಿ ಪ್ರಾಣಲಿಂಗವ ಕರಸ್ಥಲಕ್ಕೆ ಬಿಜಯಂಗೈಸಿ ಕೊಟ್ಟ ಬಳಿಕ, ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆಗಟ್ಟಿಗೊಂಡು ಮನಮುಟ್ಟಿ ಪೂಜಿಸಿ ಪ್ರಸಾದವಂ ಪಡೆದು ನಿಜಮುಕ್ತಿಯನೈದಲರಿಯದೆ ಈ ಗುರು ಕೊಟ್ಟ ಇಷ್ಟಲಿಂಗವ ಬಿಟ್ಟು ಗುರುಕಾರುಣ್ಯ ಚರಪ್ರಸಾದ ಹೊರಗಾದ, ಧರೆಯ ಮೇಲಣ ಪ್ರತಿಷ್ಠೆಯನುಳ್ಳ ಭವಿಶೈವದೈವಕ್ಕೆರಗುವ ದುರಾಚಾರಿಗಳಿಗೆ ಅಘೋರನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.