Index   ವಚನ - 1679    Search  
 
ಶ್ರೀಗುರು ಸಾಹಿತ್ಯಸಂಬಂಧವ ಮಾಡುವಲ್ಲಿ; ಲಿಂಗವೆ ಜಂಗಮ, ಜಂಗಮವೆ ಲಿಂಗವೆಂದು, ಹೇಳಿಕೊಟ್ಟ ವಿವರವನರಿಯದೆ, ಲಿಂಗದೊಳಗೆ ಜಂಗಮವುಂಟೆಂದು ಗಳಹುತಿಪ್ಪಿರಿ. ರಾಸಿಗಿಕ್ಕದ ಲಚ್ಚಣ ರಾಸಿಯ ಕೊಳಬಲ್ಲುದೆ, ರಾಸಿಯ ಒಡೆಯನಲ್ಲದೆ?- ಆ ಪರಿಯಲ್ಲಿ ಲಿಂಗವು ಜಂಗಮದ ಮುದ್ರೆ, ಅದಕ್ಕೆ ಜಂಗಮವೆ ಮುದ್ರಾಧಿಪತಿಯಾದ ಕಾರಣ, ಜಂಗಮದೊಳಗೆ ಲಿಂಗವುಂಟೆಂಬುದು ಸತ್ಯವಲ್ಲದೆ ಲಿಂಗದೊಳಗೆ ಜಂಗಮವುಂಟೆಂಬುದು ಅಸತ್ಯವು. ವೃಕ್ಷದ ಕೊನೆಗಳಿಗೆ ಉದಕವ ನೀಡಿದಡೆ ಫಲವಹುದೆ? ಬೇರಿಂಗೆ ನೀಡಬೇಕಲ್ಲದೆ. ವೃಕ್ಷದ ಆಧಾರವೆ ಪೃಥ್ವಿ, ಪೃಥ್ವಿಯೆ ಜಂಗಮ, ಶಾಖೆಯೆ ಲಿಂಗವು. ದೇಹದ ಮೇಲೆ ಸಕಲಪದಾರ್ಥಂಗಳ ತಂದಿರಿಸಿದಡೆ ತೃಪ್ತಿಯಹುದೆ? ಮುಖವ ನೋಡಿ ಒಳಯಿಂಕೆ ನೀಡಬೇಕಲ್ಲದೆ. ಅದು ಕಾರಣವಾಗಿ-ಅವಯವಂಗಳು ಕಾಣಲ್ಪಟ್ಟ ಮುಖವುಳ್ಳುದೆ ಜಂಗಮದೇಹವೆ ಲಿಂಗ. ಲಿಂಗವೆಂಬುದು ಜಂಗಮದೊಂದಂಗ ಕಾಣಾ ಕೂಡಲಚೆನ್ನಸಂಗಮದೇವಯ್ಯಾ.