Index   ವಚನ - 1680    Search  
 
ಶ್ರೀಶೈಲ ಸಿಂಹಾಸನದ ಮೇಲೆ ಕುಳ್ಳಿರ್ದು, ಪುರದ ಬಾಗಿಲೊಳು ಕದಳಿಯ ನಿರ್ಮಿಸಿದರು, ನರರು ಸುರರು ಮುನಿಗಳಿಗೆ ಮರಹೆಂಬ ಕದವನಿಕ್ಕಿ ತರಗೊಳಿಸಿದರು ತ್ರಿವಿಧ ದುರ್ಗಂಗಳ. ಆ ಗಿರಿಯ ಸುತ್ತಲು ಗಾಳಿ ದೆಸೆದೆಸೆಗೆ ಬೀಸುತ್ತಿರೆ, ಕೆರಳಿ ಗಜ ಎಂಟೆಡೆಗೆ ಗಮಿಸುತ್ತಿರಲು ಪರಿವಾರ ತಮ್ಮೊಳಗೆ ಅತಿಮಥನದಿಂ ಕೆರಳಿ ಪುರದ ನಾಲ್ಕು ಕೇರಿಯನೆ ಬಲಿದರು. ಆ ನರನೆಂಬ ಹೆಸರಳಿದು, ಗುರುಮಾರ್ಗದಿಂದ ಮರಹೆಂಬ ಕದವ ಮುರಿದು, ಒಳಹೊಕ್ಕು ಪುರದ ಮರ್ಮವನರಿದು, ಭರದಿಂದ ತ್ರಿಸ್ಥಾನವನುರುಹಿ ಪರಿವಾರವನು ವಶಕ್ಕೆ ತಂದು, ಗಿರಿಶಿಖರವನೇರಿ ಪುರವ ಸೂರೆಯಂಗೊಂಡು, ಪುರಕ್ಕೊಡೆಯನಾಗಿ ಪರಿಣಾಮದಿಂದ ಕೂಡಲಚೆನ್ನಸಂಗಯ್ಯನಲ್ಲಿ ಶರಣಾದವಂಗೆ ನಮೋ ನಮೋ ಎಂಬೆ.