Index   ವಚನ - 1707    Search  
 
ಸರ್ವೇಂದ್ರಿಯ ಸಮ್ಮತವಾಗಿ ಸರ್ವಕರಣಂಗಳ ಸಮಾಧಾನವ ಮಾಡಿ, ಸಮಸ್ತ ಸುಖಭೋಗಾದಿಗಳ ಬಯಸದೆ, ತನ್ನ ಮರೆದು ಶಿವತತ್ತ್ವವನರಿದು, ಅಹಂಕಾರ ಮಮಕಾರವಿಲ್ಲದೆ, ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯ ಮೀರಿ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಗಳನಳಿದು, ಸ್ತುತಿ-ನಿಂದಾದಿ, ಕಾಂಚನ ಲೋಷ್ಠಂಗಳ ಸಮಾನಂಗಂಡು, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಾದಿ ಪದಂಗಳ ಬಯಸದೆ, ವೇದ ವೇದಾಂತ ತರ್ಕ ವ್ಯಾಕರಣ ದರ್ಶನ ಸಂಪಾದನೆಗಳ ತೊಲಗಿಸಿ, ಖ್ಯಾತಿ ಲಾಭದ ಪೂಜೆಗಳ ಬಯಸದೆ ತತ್ತ್ವನಿರ್ಣಯವನರಿಯದವರೊಳು ತಾನೆಂಬುದನೆಲ್ಲಿಯೂ ತೋರದೆ, ಹೊನ್ನು ತನ್ನ ಲೇಸ ತಾನರಿಯದಂತೆ, ಬೆಲ್ಲ ತನ್ನ ಸಿಹಿಯ ತಾನರಿಯದಂತೆ, ವಾರಿಶಿಲೆ ಉದಕದೊಳಡಗಿದಂತೆ, ಪುಷ್ಪದೊಳಗೆ ಪರಿಮಳವಡಗಿದಂತೆ, ಅಗ್ನಿಯೊಳಗೆ ಕರ್ಪೂರವಡಗಿದಂತೆ, ಮಹಾಲಿಂಗದಲ್ಲಿ ಲೀಯವಾದುದೆ ಲಿಂಗೈಕ್ಯ ಕಾಣಾ ಕೂಡಲಚೆನ್ನಸಂಗಮದೇವಾ.