ಸುವರ್ಣದ ಕೆಲಸಕ್ಕೆ ಹೊಂಬಿತ್ತಾಳೆಯ ಕೆಲಸವೆಂಬರು.
ಸಕ್ಕರೆ ಮೃದುವೆಂದರೆ ಮರಳು ಮೃದುವೆಂಬರು.
ಕಪ್ಪುರ ಬಿಳಿದೆಂದರೆ ಉಪ್ಪು ಬಿಳಿದೆಂಬರು.
ಸಿಂಹದ ನಡು ಸಣ್ಣದೆಂದರೆ ನಾಯ ನಡು ಸಣ್ಣದೆಂಬರು.
ಶಿವಜ್ಞಾನಿಗಳಿಗೆ ಲೋಕದ ಅಜ್ಞಾನಿಗಳು ತಾವು ಸಮವೆಂಬರು.
ಇದು ಹಂಚ ಹಿಡಿದು ಮೈಯಲ್ಲ ಮಸಿಯಾದಂತಾಯಿತ್ತು ಕಾಣಾ
ಕೋಡಲಚೆನ್ನಸಂಗಮದೇವ.