Index   ವಚನ - 1735    Search  
 
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: “ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ” ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ‘ಏಕೋ ದೇವೋ ನ ದ್ವಿತೀಯಃ’ ಎಂದು ಶುದ್ಧಶೈವನಿಷ್ಠಾಪರನಾಗಿ, ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.