Index   ವಚನ - 1747    Search  
 
ಹುಸಿಯಂಕರಿಸಿತ್ತು ಹೊಲೆಯನಲ್ಲಿ, ಹುಸಿ ಎರಡೆಲೆಯಾಯಿತ್ತು ಮಾದಿಗನಲ್ಲಿ, ಹುಸಿ ನಾಲ್ಕೆಲೆಯಾಯಿತ್ತು ಸಮ್ಮಗಾರನಲ್ಲಿ, ಹುಸಿ ಆರೆಲೆಯಾಯಿತ್ತು ಅಗಸನಲ್ಲಿ, ಹುಸಿ ಎಂಟೆಲೆಯಾಯಿತ್ತು ವ್ಯವಹಾರಿಯಲ್ಲಿ, ಹುಸಿ ಸಸಿಯಾಗಿತ್ತು ಹಾದರಿಗನಲ್ಲಿ, ಹುಸಿ ಗಿಡವಾಗಿತ್ತು ಮದ್ಯಪಾನಿಯಲ್ಲಿ, ಹುಸಿ ಮರವಾಯಿತ್ತು ಜೂಜುಗಾರನಲ್ಲಿ, ಹುಸಿ ಹೂವಾಯಿತ್ತು ಡೊಂಬನಲ್ಲಿ, ಹುಸಿ ಕಾಯಾಯಿತ್ತು ಅಕ್ಕಸಾಲಿಗನಲ್ಲಿ, ಹುಸಿ ಹಣ್ಣಾಯಿತ್ತು ಸೂಳೆಯಲ್ಲಿ, ಹುಸಿ ಹಣ್ಣಾಗಿ ತೊಟ್ಟು ಬಿಚ್ಚಿತ್ತು ಅರಸನಲ್ಲಿ. ಇಂತೀ ಹುಸಿಯ ನುಡಿವವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕವಿಲ್ಲಾಗಿ ಮೋಕ್ಷವಿಲ್ಲ. ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನ ಶರಣರು ಹುಸಿಯ ಬಿಟ್ಟುಕಳೆದು ನಿಜಲಿಂಗೈಕ್ಯರಾದರು.