Index   ವಚನ - 1757    Search  
 
ಹೊರಗನೆ ಕೊಯ್ದು ಹೊರಗನೆ ಪೂಜಿಸಿದಡೆ, ಪರಿಣಾಮವಿಲ್ಲ, ಪ್ರಯೋಜನವಿಲ್ಲ ಸುಖ ದೊರೆಕೊಳ್ಳದು ನೋಡಾ! ಅದೆಂತೆಂದಡೆ: ಸರ್ವಜೀವಂಗಳಲ್ಲಿ ಜೀವಹಿಂಸೆಯ ಮಾಡದಿರಬಲ್ಲಡೆ ಪ್ರಥಮಪುಷ್ಪ. ಸರ್ವೇಂದ್ರಿಯಂಗಳ ನಿಗ್ರಹಿಸಿಕೊಂಡಿರಬಲ್ಲಡೆ ದ್ವಿತೀಯಪುಷ್ಪ. ಸರ್ವಾಹಂಕಾರವರತು ಶಾಂತನಾಗಿರಬಲ್ಲಡೆ ತೃತೀಯಪುಷ್ಪ. ಸರ್ವವ್ಯಾಪಾರವಳಿದು ನಿರ್ವ್ಯಾಪಾರಿಯಾಗಿರಬಲ್ಲಡೆ ಚತುರ್ಥಪುಷ್ಪ. ದುರ್ಭಾವ ಪ್ರಕೃತಿಯಳಿದು ಸದ್ಭಾವವೆಡೆಗೊಂಡಿರಬಲ್ಲಡೆ ಪಂಚಮಪುಷ್ಪ. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾಗಿರಬಲ್ಲಡೆ ಷಷ್ಠಮಪುಷ್ಪ. ಅನೃತವ ಮರೆದು ಸತ್ಯವ ನುಡಿಯಬಲ್ಲಡೆ ಸಪ್ತಮಪುಷ್ಪ. ಸಕಲಪ್ರಪಂಚವಳಿದು ಶಿವಜ್ಞಾನಸಂಪನ್ನರಾಗಿರಬಲ್ಲಡೆ ಅಷ್ಟಮಪುಷ್ಪ. ಇಂತೀ ಅಷ್ಟದಳಕಮಲದಲ್ಲಿ ಸಹಜಪೂಜೆಯ ಮಾಡಬಲ್ಲ ಶರಣರು ನಿಮ್ಮ ಪ್ರತಿಬಿಂಬದಂತಿಪ್ಪರು ಕಾಣಾ, ಕೂಡಲಚೆನ್ನಸಂಗಮದೇವಾ.