Index   ವಚನ - 1758    Search  
 
ಹೊರಗನೆ ಹಾರೈಸಿ, ಹೊರಗಣ ಸದಾಚಾರ ಕ್ರಿಯೆಗಳ, ಮನಮುಟ್ಟಿ ಮಾಡುತ್ತಿರಲು; ಇದೆಲ್ಲಿಯ ಹೊರಗಣಸುಖವೆಂದು, ಸುವಿಚಾರ ಕಣ್ದೆರೆದು ನೋಡಲು ಕನ್ನಡಿಯೊಳಗಣ ರೂಪ ತಾನೆಂದರಿವಂತೆ ಮೆಲ್ಲಮೆಲ್ಲನೆ ಒಳಗೆ ಅಡಗಿತ್ತಯ್ಯಾ. ಲಿಂಗಸುಖದ ಸುಗ್ಗಿಯಲ್ಲಿ ಎನ್ನ ಪ್ರಾಣ ಮನ ಕರಣಂಗಳು ಮೇರೆದಪ್ಪಿದ ಸುಖಸಮುದ್ರದೊಳಗೋಲಾಡಿದಂತಾದೆನಯ್ಯಾ! ಮುಳುಗಿದೆನಯ್ಯಾ, ಸ್ವಾನುಭಾವವೆಂಬ ಗುರುವಿನ ಕರುಣದಲ್ಲಿ. ಇಂತಾದ ಬಳಿಕ ಕೂಡಲಚೆನ್ನಸಂಗಯ್ಯನೆ ಪ್ರಾಣವಾಗಿದ್ದನಯ್ಯಾ.