Index   ವಚನ - 8    Search  
 
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದವು. ಪ್ರಸಾದವೆ ಕೋಟಿಲಿಂಗವೆಂದರಿವುದು. ಪ್ರಸಾದಮೂರ್ತಿಯಾದ ಶರಣನ ರೋಮ ರೋಮಂಗಳು ಕೋಟಿಲಿಂಗವೆಂದುಚ್ಚರಿಸುವರಲ್ಲಾ ! ಘ್ರಾಣಮುಖ ನಾಸಿಕ ಆಚಾರಲಿಂಗವಾಗಿ, ಗಂಧದ್ರವ್ಯವ ಗ್ರಹಿಸಿ ಗಂಧವಾದ ಪ್ರಸಾದವೆ ಬಿಂದು, ಸರ್ವಾಂಗಮಯವಾದ ಮಹೇಶ್ವರನ ಷಡುರಸವ ಭುಂಜಿಸುವ ಜಿಹ್ವೆಯೆ ಗುರುಲಿಂಗ. ಷಡಕ್ಷರಿಮಂತ್ರನಾದ ಪ್ರಸಾದಿ, ಅಗ್ನಿಯೇ ನೇತ್ರ ಸ್ವರ ಸರ್ವಾಂಗಮೂರ್ತಿ ಶಿವಲಿಂಗ. ದೃಶ್ಯಾದೃಶ್ಯ ದೃಕ್ಕು ಜಾತಿ ಜ್ಯೋತಿಸ್ವರೂಪು ತಾನಾದ ಪ್ರಸಾದಿ. ಸ್ಥಾವರ ಜಂಗಮ ಪ್ರಣಮಸ್ವರೂಪು ತ್ವಕ್ಕು ಸರ್ವಾಂಗ ಸ್ಪರ್ಶನ ಜಂಗಮಲಿಂಗನಾದ ಪ್ರಸಾದಿ. ಆಕಾಶ, ಘಟಾಕಾಶ, ಮಠಾಕಾಶ, ಬಿಂದ್ವಾಕಾಶ, ಚಿದಾಕಾಶ, ವ್ಯೋಮಾಕಾಶ ಗೋತ್ರ ಸಹಲಿಂಗನಾದ ಪ್ರಸಾದಿ. ಜೀವಾತ್ಮ ಅಂತರಾತ್ಮ ಪರಮಾತ್ಮ ಸರ್ವೇಂದ್ರಿಯ ತೃಪ್ತಿಯಾದ ಮಹಾಲಿಂಗನಾದ ಪ್ರಸಾದಮೂರ್ತಿ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.