ಲಿಂಗಸೋಂಕಿ[ಅಂಗ] ಲಿಂಗವಾಗದಿದ್ದರೆ ಅದು ಲಿಂಗವಲ್ಲ.
ಪ್ರಸಾದಸೋಂಕಿ[ಪದಾರ್ಥ] ಪ್ರಸಾದವಾಗದಿದ್ದರೆ
ಅದು ಪ್ರಸಾದವಲ್ಲ,ಅದು ಅಶುದ್ಧ.
ಮಂತ್ರಸೋಂಕಿ[ಮಾಂಸಪಿಂಡ] ಮಂತ್ರಮೂರ್ತಿಯಾಗದಿದ್ದರೆ
ಅದು ಮಂತ್ರವಲ್ಲ,ಅದರ ಭಾವ ಬೇರೆ.
ಈ ತ್ರಿವಿಧ ಭೇದವನರಿಯದ ವೇಷಧಾರಿಗಳು ಭಕ್ತರಲ್ಲ.
ದೇವಭಕ್ತರಾದರೇನು, ಮಲದೇಹಿ ಮಾಂಸಪಿಂಡ ಇರುವದು.
ತಮ್ಮ ದೇಹ ಕಲ್ಲುಸೋಂಕಿ ಹಸ್ತ ಸುಚಿತ್ತವಾಯಿತೆಂದು
ಪುಕಳಿಯನೊರೆಸುವ ಅರಿವೆಯಲ್ಲಿ ಮಗಿ ಹಿಡಿದು
ನೀರು ಹೊಯ್ದುಕೊಂಡು ಶುದ್ಧವಾಯಿತೆಂಬವರು,
ಅವರು ಮಲದೇಹಿ, ಅವನ ಹಸ್ತ ಶುದ್ಧವಲ್ಲ, ಅದು ಅಶುದ್ಧ.
ಆ ಕೈಯಲಿ ಲಿಂಗವ ಹಿಡಿದುದು ಲಿಂಗವಲ್ಲ, ಅದು ಪ್ರೇತಲಿಂಗ.
'ಸಂಸಾರೀ ಭೂತಃ ಪ್ರಾಣೇನ ಜಾಯತೇ ಪ್ರಾತಃಕಾಲೇ |
ಮುಖಂ ದೃಷ್ಟ್ವಾ ಕೋಟಿ ಜನ್ಮನಿ ಸೂಕರಃ||'
ಇಂತಪ್ಪ ತಮ್ಮ ಅಂಗದ ಅಶುದ್ಧವ ಕಳೆಯಲಾರದೆ
ಲಿಂಗಾಂಗಿ ಲಿಂಗಪ್ರಾಣಿಗಳೆಂದೆನಿಸುವ ವೇಷಧಾರಿಗಳಿಗೆ
ಹಂದಿಯ ಜನ್ಮ ತಪ್ಪದೆಂದ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.