Index   ವಚನ - 29    Search  
 
ಅಂಗದ ಮೇಲೆ ಲಿಂಗವ ಧರಿಸಿದಬಳಿಕ ಸರ್ವಾಂಗಲಿಂಗವಾಗದಿದ್ದರೆ ಆ ಲಿಂಗವ ಏತಕ್ಕೆ ಧರಿಸಲಿ? ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ ಆ ಪ್ರಸಾದ ಏತಕ್ಕೆ ಕೊಳ್ಳಲಿ? ಇದು ಕೊಟ್ಟವನ ಗುಣದಿಂದಾದುದು. ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ? ಏತಕ್ಕೆ ಪ್ರಸಾದವ ಕೊಂಬುವಿರಿ ? ಇದಕ್ಕೆ ಸಾಕ್ಷಿ: 'ಸರ್ವದ್ರವ್ಯವಂಚ ವೇದಯಂ ತದ್ವಾಹಾ ನ ವಿಖವತೆ' ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ. ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿನಿಮ್ಮ ನಡೆ ಎಂತೆಂದಡೆ: ಸಾಕ್ಷಿ: 'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ | ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು. ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ. ಗುರು, ಲಿಂಗ, ಜಂಗಮ, ತೀರ್ಥಪ್ರಸಾದ ಪಂಚಬ್ರಹ್ಮಮೂರ್ತಿ ನಿಮ್ಮ ಶರಣ. ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ, ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ, ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.