Index   ವಚನ - 31    Search  
 
ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ. ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು. ಶಿವಭಕ್ತ ಜನ್ಮದಲ್ಲಿ ಬಂದು ಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು. ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು, ಶಿವನ ಸಾಕಾರವೆ ಜಂಗಮದೇವ. ಇಂತೆಂಬ ಉಭಯಭೇದ ನಿಮಗೆ ತಿಳಿಯದು. ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆ ಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.