Index   ವಚನ - 1    Search  
 
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾಧಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.