ಒಬ್ಬಳ ಸಂಗದಿಂದ ಐವರು ಮೊದಲಗಿತ್ತೇರು
ಬಂದ ಬೆಡಗ ನೋಡಾ!
ಮಹಾ ಅರಿವುಯೆಂಬ ಗದ್ದುಗೆಯ ಮೇಲೆ,
ಮದಲಿಂಗನ ಕುಳ್ಳಿರಿಸಿ,
ಕೆಂಡದ ಬಾಸಿಂಗ ಕಟ್ಟಿ, ಉರಿಯ ಹಚ್ಚಡ ಹೊಚ್ಚಿ,
ಆ ಮದಲಿಂಗನ ಬಸುರಲಿ ಬಂದ ಶಿಶುವು ನಲಿನಲಿದಾಡುತ್ತ ಇರಲು
ಅಲ್ಲಿ ಒಬ್ಬಳು ಕಂಡು ಎತ್ತಿಕೊಂಡು
ಗಮನಕ್ಕೆ ನಿರ್ಗಮನವಾದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.