ಸಹಸ್ರದಳಕಮಲಮಂಟಪದಲ್ಲಿ ಓಂಯೆಂಬ ತಾಯಿ
ಒಬ್ಬ ಮಗನ ಹಡೆದು ಸಾಕಿ ಸಲುಹಿ ತನ್ನಂತೆ ಮಾಡಿಕೊಂಡು
ತತ್ಪುರುಷಲೋಕದಲ್ಲಿರುವ ಈಶ್ವರನ ಮಗಳ ತಕ್ಕೊಂಡು,
ನಿಟಿಲವೆಂಬ ಹಸೆಯಜಗುಲಿಯ ಮೇಲೆ
ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ,
ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲ್ಲಿಸಿ,
ಮಹಾಜ್ಞಾನವೆಂಬ ಹಂದರವ ಹೊಂದಿಸಿ,
ಪ್ರಾಣಾಪಾನ ವ್ಯಾನ ಉದಾನ ಸಮಾನ ನಾಗ
ಕೂರ್ಮ ಕ್ರಕರ ದೇವದತ್ತ ಧನಂಜಯಯೆಂಬ
ಹತ್ತು ತೋರಣವ ಕಟ್ಟಿ,
ಚಂದ್ರ ಸೂರ್ಯರೆಂಬ ದೀವಿಗೆಯ ಮುಟ್ಟಿಸಿ,
ಪಾತಾಳಲೋಕದಲ್ಲಿರ್ಪ ಭಕ್ತನ ಕರೆಸಿ,
ಮರ್ತ್ಯಲೋಕದಲ್ಲಿರ್ಪ ಮಹೇಶ್ವರನ ಕರೆಸಿ,
ಸ್ವರ್ಗಲೋಕದಲ್ಲಿರ್ಪ ಪ್ರಸಾದಿಯ ಕರೆಸಿ,
ತತ್ಪುರುಷಲೋಕದಲ್ಲಿರ್ಪ ಪ್ರಾಣಲಿಂಗಿಯ ಕರೆಸಿ,
ಈಶಾನ್ಯಲೋಕದಲ್ಲಿರ್ಪ ಶರಣನ ಕರೆಸಿ,
ಈ ಪಂಚಮೂರ್ತಿಗಳಂ ಮಜ್ಜನಂಗೈಸಿ ಕುಳ್ಳಿರ್ದರು ನೋಡಾ !
ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೀಣೆ, ರುದ್ರಂಗೆ ಮೃದಂಗ,
ಈಶ್ವರಂಗೆ ಶಂಖ, ಸದಾಶಿವಂಗೆ ಘಂಟೆ,
ಈ ಪಂಚಮೂರ್ತಿಗಳು ನಾದವಾಲಗವಂ ಮಾಡುತಿಪ್ಪರು ನೋಡಾ !
ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ
ಈ ಐವರು ನಾಂಟ್ಯವನಾಡುತ್ತಿಪ್ಪರು ನೋಡಾ !
ನಿಷ್ಪತ್ತಿಯೆಂಬ ಬಸವಣ್ಣನ ಮೇಲೆ
ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ,
ಸೋಮಬೀದಿ ಸೂರ್ಯಬೀದಿಯಲ್ಲಿ ಮೆರವಣಿಗೆಯಂ ಮಾಡಿ,
ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ
ಈ ಐವರು ನವರತ್ನದ ಹರಿವಾಣಗಳಲ್ಲಿ ಪಂಚಾರ್ತಿಯ ಮೇಲೆ
ಏಕಾರ್ತಿಯನಿಕ್ಕಿ ಸಪ್ತದೀಪಂಗಳ ರಚಿಸಿ ಓಂ ನಮೋ ಓಂ ನಮೋ
ಶಿವಾಯಯೆಂದು ಬೆಳಗುತಿರ್ಪರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sahasradaḷakamalamaṇṭapadalli ōnyemba tāyi
obba magana haḍedu sāki saluhi tannante māḍikoṇḍu
tatpuruṣalōkadalliruva īśvarana magaḷa takkoṇḍu,
niṭilavemba haseyajaguliya mēle
madaliṅga modalagittiya kuḷḷirisi,
antaḥkaraṇacatuṣṭayaṅgaḷemba nālku kambava nillisi,
mahājñānavemba handarava hondisi,
prāṇāpāna vyāna udāna samāna nāga
kūrma krakara dēvadatta dhanan̄jayayemba
hattu tōraṇava kaṭṭi,
candra sūryaremba dīvigeya muṭṭisi,
pātāḷalōkadallirpa bhaktana karesi,
martyalōkadallirpa mahēśvarana karesi,
svargalōkadallirpa prasādiya karesi,
Tatpuruṣalōkadallirpa prāṇaliṅgiya karesi,
īśān'yalōkadallirpa śaraṇana karesi,
ī pan̄camūrtigaḷaṁ majjanaṅgaisi kuḷḷirdaru nōḍā!
Brahmaṅge tāḷa, viṣṇuviṅge vīṇe, rudraṅge mr̥daṅga,
īśvaraṅge śaṅkha, sadāśivaṅge ghaṇṭe,
ī pan̄camūrtigaḷu nādavālagavaṁ māḍutipparu nōḍā!
Ādiśakti mantraśakti kriyāśakti icphāśakti jñānaśakti
ī aivaru nāṇṭyavanāḍuttipparu nōḍā!
Niṣpattiyemba basavaṇṇana mēle
madaliṅga modalagittiya kuḷḷirisi,
sōmabīdi sūryabīdiyalli meravaṇigeyaṁ māḍi,
Kriyāśakti jñānaśakti icphāśakti ādiśakti parāśakti
ī aivaru navaratnada harivāṇagaḷalli pan̄cārtiya mēle
ēkārtiyanikki saptadīpaṅgaḷa racisi ōṁ namō ōṁ namō
śivāyayendu beḷagutirparu nōḍā
jhēṅkāra nijaliṅgaprabhuve.