ಹುಲ್ಲುಮಾರುವ ಹಾವಾಡಿಗಂಗೆ
ಏಳುಮಂದಿ ಮಕ್ಕಳು ಹುಟ್ಟಿದರು ನೋಡಾ !
ಆ ಮಕ್ಕಳ ಕೈಬಾಯೊಳಗೆ ಈರೇಳು ಲೋಕಂಗಳೆಲ್ಲ
ನಚ್ಚುಮಚ್ಚಾಗಿ ಇರ್ಪವು ನೋಡಾ !
ಆದಿಯ ಲಿಂಗದ ಸಂಗದಿಂದ ಒಬ್ಬಳು ಬಂದು
ಹುಲ್ಲುಮಾರುವ ಹಾವಾಡಿಗನ ಹಿಡಿಯಲು
ಏಳು ಮಂದಿ ಮಕ್ಕಳು ಬಿಟ್ಟು ಹೋದರು ನೋಡಾ !
ಆ ಹಾವಾಡಿಗನ ಕೈಯಲ್ಲಿ ರತ್ನವಿಪ್ಪುದು ನೋಡಾ !
ಆ ರತ್ನವು ನಡುಮಧ್ಯದಲ್ಲಿ ಉಳಿದಿತ್ತು.
ನವನಾಳಕ್ಕೆ ಒಂದೇ ಬೆಳಗಾಯಿತ್ತು ನೋಡಾ !
ಆದಿಯ ಲಿಂಗವ ಕೂಡೆ ಲಿಂಗವಾಯಿತ್ತು,
ಅಯ್ಯಾ ಝೇಂಕಾರ ನಿಜಲಿಂಗಪ್ರಭುವೆ.