Index   ವಚನ - 155    Search  
 
ಸರ್ವಮಯವ ಗರ್ಭೀಕರಿಸಿಕೊಂಡಿರ್ದ ಲಿಂಗವ ನೋಡಹೋಗದ ಮುನ್ನ ಅದು ಎನ್ನನೊಳಕೊಂಡಿತ್ತು ನೋಡಾ! ಅದಕ್ಕೆ ಪಾದ ಒಂದು, ಹಸ್ತ ಮೂರು, ಅಂಗವಾರು, ಮೂವತ್ತಾರು ತಲೆಯು, ಐವತ್ತೆರಡು ನಾಲಗೆಯು, ಒಂಬತ್ತು ಬಾಗಿಲ ದೇಗುಲದೊಳಗೆ ಇಪ್ಪ ಲಿಂಗವನು ಮನೋಹರನೆಂಬ ಪೂಜಾರಿಯು, ನವರತ್ನವೆಂಬ ತೊಂಡಲಂಗಳ ಕಟ್ಟಿ ಗೋಪ್ಯದಿಂದ ಲಿಂಗಾರ್ಚನೆಯಂ ಮಾಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ದ್ವಂದವೆಂಬ ಧೂಪವ ತೋರೆ, ಆ ಮನೋಹರನೆಂಬ ಪೂಜಾರಿಯ ನಿರ್ವಯಲ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.