Index   ವಚನ - 170    Search  
 
ಆಧಾರವೆಂಬ ಹಾವುಗೆಯ ಮೆಟ್ಟಿ, ವಿಷಯ ವ್ಯಸನಂಗಳೆಂಬ ಸರ್ಪಳಿಯಂ ಹಾಕಿ, ಜನನ ಮರಣಂಗಳೆಂಬ ಜಂಗವ ಕಟ್ಟಿ, ಸಲಿಲವೆಂಬ ಕೌಪವ ಹಾಕಿ, ನಿರ್ಧಾರವೆಂಬ ಕಟಿಯಂ ಧರಿಸಿ, ಅಷ್ಟಮದಂಗಳೆಂಬ ಯೋಗವಟ್ಟಿಗೆಯಂ ಹಾಕಿ, ಕುಂಡಲಿಯೆಂಬ ನಾಗಬೆತ್ತಮಂ ಪಿಡಿದು, ಭಾವವೆಂಬ ಕಪನಿಯಂ ಧರಿಸಿ, ಚಂದ್ರಸೂರ್ಯಾದಿಗಳೆಂಬ ಸರವ ಹಾಕಿ, ಓಂಕಾರವೆಂಬ ಪಾವಡವ ಸುತ್ತಿ, ಹೃದಯಧಾರಣವೆಂಬ ಸೆಜ್ಜೆಯಂ ಮಾಡಿ, ಕಂಠಸ್ಥಾನವೆಂಬ ಶಿವದಾರವಂ ಮಾಡಿ, ಮಹಾಲಿಂಗವೆಂಬ ಮೂರ್ತಿಯಂ ನೆಲೆಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನ ನೀಡಿ, ಅಂತರಂಗದ ಬೆಳಗಿನ ಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿರ್ದ್ವಂದ್ವವೆಂಬ ಧೂಪವ ತೋರಿ, ಆ ಲಿಂಗಕ್ಕೆ ಒಬ್ಬ ಸತಿಯಳು ಭಕ್ತನೆಂಬ ಅಡ್ಡಣಿಗೆಯ ಮೇಲೆ ಮಾಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯಂ ತಳೆದು, ಆ ಸತಿಯಳು ಆ ಲಿಂಗಕ್ಕೆ ನೈವೇದ್ಯವ ತೋರುತಿರ್ಪಳು ನೋಡಾ ! ಆ ಲಿಂಗಕ್ಕೆ ನಾದವಾಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ- ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ, ಈ ಐವರು ನಾದದ ವಾಲಗವ ಮಾಡುವುದ ಕಂಡೆನಯ್ಯ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಈ ಐವರೂ ನಾಂಟ್ಯವನಾಡುತಿರ್ಪರು ನೋಡಾ ! ನವನಾಳದಲ್ಲಿ ನವಮೂರ್ತಿಗಳು ನವದೀಪವ ನವಧೂಪವ ಬೆಳಗುತಿರ್ಪರು ನೋಡಾ ! ಸೋಪಾನವಿಡಿದು ಪ್ರಣವಬೆಳಗಿನೊಳು ಸುಳಿದಾಡುವ ಜಂಗಮಕ್ಕೆ ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.