ಸ್ವರ್ಗಮರ್ತ್ಯಪಾತಾಳವ ನುಂಗಿತ್ತಯ್ಯ ಒಂದು ಎರಳೆ.
ಆ ಎರಳೆಯ ಕೊಂಬಿನ ತುದಿಯ ಮೇಲೆ
ಅರವತ್ತು ಆರು ಕೋಟಿ ಪಟ್ಟಣಂಗಳು ಅಡಗಿರ್ದವು ನೋಡಾ.
ಒಬ್ಬ ತಳವಾರನ ಹೆಂಡತಿ ಹಾವಿನ ಸಿಂಬೆಯ ಮಾಡಿಕೊಂಡು,
ಬಯಲ ಕೊಡನ ತಕ್ಕೊಂಡು, ನೀರಿಲ್ಲದ ಬಾವಿಗೆ ಹೋಗಿ
ನೀರನೆ ಮೊಗೆವ ಸತಿಯಳ ಇರುವೆ ನುಂಗಿತ್ತು ನೋಡಾ.
ಆ ತಳವಾರನ ಸರ್ಪ ನುಂಗಿತ್ತು ನೋಡಾ.
ಇದೇನು ವಿಚಿತ್ರವೆಂದು ನಿಶ್ಚಿಂತನಿವಾಸಿಗಳಾದರು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.